ಪೊಲೀಸರ ಕಾರ್ಯ ಅನನ್ಯವಾಗಿದೆ: ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹರೀಶ ಎ
ವಿಜಯಪುರ : ಸಮಾಜದ ಭದ್ರತೆ ಹಾಗೂ ಸುರಕ್ಷತೆಗಾಗಿ ಹಗಲಿರುಳು ಧೈರ್ಯ ಸಾಹಸ ಹಾಗೂ ಕರ್ತವ್ಯಕ್ಕೆ ಕಟಿಬದ್ಧರಾಗಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಪೊಲೀಸರ ಕಾರ್ಯ ಅನನ್ಯವಾಗಿದೆ. ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಹರೀಶ ಎ ಅವರು ಅವರು ಹೇಳಿದರು.ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿ, ಮಾತನಾಡಿದ ಅವರು, ಜನರ ಸಂಧಿಗ್ಧ ಹಾಗೂ ಕಷ್ಟಕಾಲದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ.
ಸಾರ್ವಜನಿಕರ ಸುರಕ್ಷೆತೆಯನ್ನೇ ಆದ್ಯತೆಯನ್ನಾಗಿಸಿ ತಮ್ಮ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಪೊಲೀಸರ ಸಂಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ. ಹಬ್ಬ ಹರಿದಿನಗಳೆನ್ನದೇ ತಮ್ಮ ಕುಟುಂಬದಿಂದ ದೂರ ಇದ್ದು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುವ ಪೊಲೀಸರಿಗೆ ಸಹಕಾರ ನೀಡುವುದು ಸಾರ್ವಜನಿಕರ ಬಹು ದೊಡ್ಡ ಜವಾಬ್ದಾರಿಯಾಗಿದೆ. ಅವರಿಗೆ ಸಹಕಾರ ನೀಡುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಕೈ ಬಲಪಡಿಸೋಣ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಮಾತನಾಡಿ, ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಜನರು ನೆಮ್ಮದಿಯಾಗಿ ಜೀವನ ನಡೆಸಲು ಪೂರಕವಾಗಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಯಾವುದೇ ಅಹಿತಕರ ಘಟನೆ ಘಟಿಸದಂತೆ ಕಾನೂನು ಮತ್ತು ಸುವ್ಯವಸ್ಥೆ ಜೊತೆಗೆ ಅಪರಾಧಗಳ ತಡೆಗಟ್ಟುವುದು ಮತ್ತು ಅಪರಾಧಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುವ ಮೂಲಕ ಜನಸಾಮಾನ್ಯರ ಆಸ್ತಿ-ಪಾಸ್ತಿ ಜೀವ ರಕ್ಷಣೆಗೆ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತದೆ. ತುರ್ತು ಸಂದರ್ಭದಲ್ಲಿ, ಪ್ರವಾಹ ಉಂಟಾದ ಸಂದರ್ಭದಲ್ಲಿ ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ,ಜನ ಜಾನುವಾರಗಳ ರಕ್ಷಣೆ ಹೊಣೆ ಹೊತ್ತು ಪೊಲೀಸ್ ಇಲಾಖೆ ತೊಡಗಿಸಿಕೊಂಡು, ತಮ್ಮ ಜೀವದ ಹಂಗು ಲೆಕ್ಕಿಸದೇ ಸಮಾಜದಲ್ಲಿ ಶಾಂತಿ ನೆಲೆಸಲು, ಜನರ ನೆಮ್ಮದಿಗೆ ಕಾರಣರಾಗಿದ್ದಾರೆ. ಕರ್ತವ್ಯ ನಿರ್ವಹಣೆ ಸಂದರ್ಭ ಹುತಾತ್ಮರಾದ ಪೊಲೀಸರನ್ನು ಇಡೀ ದೇಶ ಇಂದು ಸ್ಮರಿಸುತ್ತಿದೆ. ತ್ಯಾಗ ಮತ್ತು ಬಲಿದಾನ ಮಾಡಿದ ಪೊಲೀಸ ಹುತಾತ್ಮರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಪೊಲೀಸರು ಅನೇಕ ತುರ್ತು ಪರಿಸ್ಥಿಯಲ್ಲಿ ದಿನವಿಡಿ ಕಾರ್ಯ ನಿರ್ವಹಿಸಿ ಜನರ ಹಾಗೂ ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ ಶ್ರಮಿಸುತ್ತಾರೆ.ಜನರಿಗೆ ಕಾನೂನು ಜಾಗೃತಿ-ಅರಿವು ಸಹ ಮೂಡಿಸಲಾಗುತ್ತಿದೆ. ಅಪರಾಧ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತದೆ. ಪೊಲೀಸರ ಯಶಸ್ವಿ ಕಾರ್ಯ ನಿರ್ವಹಣೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಿದೆ. ಹುತಾತ್ಮರಾದ ಪೊಲೀಸರನ್ನು ಸ್ಮರಿಸಿ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ ಅವರು ಮಾತನಾಡಿ, 1959ರ ಲಡಾಖ್‌ನ ಹಾಟ್‌ಸ್ಪಿçಂಗ್ಸನಲ್ಲಿ ಚೀನಿ ಪಡೆಗಳಿಂದ ವೀರಮರಣ ಹೊಂದಿದ ಧೀರೋದಾತ್ತ ಪೊಲೀಸರ ಸ್ಮರಣಾರ್ಥ ಪ್ರತಿ ವರ್ಷ ಅ.21ರಂದು ಪೊಲೀಸ್ ಹುತಾತ್ಮರ ದಿನ ಎಂದು ಆಚರಿಸಲಾಗುತ್ತಿದೆ. ಪೊಲೀಸರು ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ರಕ್ಷಣೆ ಸಂದರ್ಭದಲ್ಲಿ ಕಾರ್ಯ ನಿರ್ವಹಣೆಯಲ್ಲಿ ಹೋರಾಡಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ದೇಶದಲ್ಲಿ ಕಳೆದು ಒಂದು ವರ್ಷದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ 191 ಜನ ಹುತಾತ್ಮರಾದ ಪೊಲೀಸರನ್ನು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮನಗೌಡ ಹಟ್ಟಿ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು,ಸಿಬ್ಬಂದಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಪೊಲೀಸ ಕುಟುಂಬದ ಸದಸ್ಯರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಪರವಾಗಿ ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಪೋಲಿಸ್ ಬ್ಯಾಂಡ್ ಮೂಲಕ ಗೀತೆ ಹಾಗೂ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಕವಾಯತ ತಂಡದ ನಿರ್ಗಮನದ ನಂತರ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಹುಮಾಯೂನ್ ಮಮದಾಪೂರ ಹಾಗೂ ಪೊಲೀಸ್ ಇಲಾಖೆಯ ದಶರಥ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.