ಮಕ್ಕಳ ಆರೋಗ್ಯಕರ ಕಲಿಕೆಗೆ ಆಟ ಬಹುಮುಖ್ಯ-ನಂದೀಪ ರಾಠೋಡ
ಇಂಡಿ: ಆಟಗಳು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಪ್ರಬಲರನ್ನಾಗಿಸುವಲ್ಲಿ ಮಹತ್ವದಾಗಿದೆ. ಆಟದ ಜೊತೆಗೆ ಪಾಠಕ್ಕೂ ಗಮನ ನೀಡಿ ಎಂದು ಇಂಡಿ ತಾಲೂಕ ಪಂಚಾಯಿತಿ ಯೋಜನಾಧಿಕಾರಿ ನಂದೀಪ ರಾಠೋಡ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ”ಅಂತಾರಾಷ್ಟ್ರೀಯ ಆಟದ ದಿನ”ವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯು ಮಕ್ಕಳಲ್ಲಿ ಕಲಿಕೆ ಮತ್ತು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸಿ, ಸೃಜನಶೀಲತೆಯನ್ನು ಬೆಳೆಸುತ್ತದೆ ಎಂದು ಹೇಳಿದರು.
ಹಿರೇರೂಗಿ ಪಿಡಿಓ ಬಸವರಾಜ ಬಬಲಾದ ಮಾತನಾಡಿ, ಮಕ್ಕಳು ಆಟವಾಡುವ ಹಕ್ಕನ್ನು ರಕ್ಷಿಸಲು ಅಂತಾರಾಷ್ಟ್ರೀಯ ಆಟದ ದಿನವಾಗಿ ಒಂದು ದಿನವನ್ನು ಗುರುತಿಸುವಂತೆ ವಿಶ್ವಸಂಸ್ಥೆಗೆ ಮಕ್ಕಳೇ ಮನವಿ ಮಾಡಿದ್ದು, ಅದರಂತೆ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಜೀವನ ಕೌಶಲ್ಯವನ್ನು ವೃದ್ಧಿಸುವಲ್ಲಿ ಆಟಗಳೇ ಮಗುವಿಗೆ ಮೊದಲ ಮೆಟ್ಟಿಲು. ದೈಹಿಕ-ಮಾನಸಿಕ ಆರೋಗ್ಯ, ಸ್ವಾಭಿಮಾನ, ಆತ್ಮವಿಶ್ವಾಸ, ಸೃಜನಶೀಲತೆ, ಸಮಾನತೆ, ಸಾಮಾಜಿಕ ಸಾಮರಸ್ಯದಂತಹ ಅಭ್ಯಾಸಗಳಿಗೆ ಕ್ರೀಡೆಯು ಅತಿ ಅವಶ್ಯಕ ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಮಕ್ಕಳ ಮನವಿಗೆ ವಿಶ್ವಸಂಸ್ಥೆ ಬೆಲೆ ನೀಡಿದ್ದು ಅತ್ಯಂತ ಸಂತಸದ ಕ್ಷಣ. ಮಕ್ಕಳ ಅಭಿವೃದ್ಧಿಯಲ್ಲಿ ಆಟದ ಪಾತ್ರ ನಿರ್ಣಾಯಕ ಎಂದು ಹೇಳಿದರು.
ಗ್ರಾಮದ ಯುವ ಮುಖಂಡ ಪರಶುರಾಮ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕ ಪಂಚಾಯಿತಿ ಕಾರ್ಯಾಲಯದ ಪ್ರಭು, ಕಳಾವಂತ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ ವೈ ಪತ್ತಾರ ಸೇರಿದಂತೆ ಎಲ್ಲ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳು ಕೇರಮ್, ಚೆಸ್ ಆಟ ಆಡಿ ಸಂಭ್ರಮಿಸಿದರು.