ಪೂಜಾ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನ..!
ಆಲಮಟ್ಟಿ: ರವಿವಾರ ಸಂತೆ ಹಾಗೂ ಸೋಮವಾರ-ಮಂಗಳವಾರ ದೀಪಾವಳಿ ಅಮವಾಸ್ಯೆ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಪೂಜಾಸಾಮಗ್ರಿಗಳು ಮತ್ತು ಪಟಾಕಿ ಮಾರಾಟ ಜೋರಾಗಿತ್ತು.
ಬೆಳಕಿನ ಹಬ್ಬವನ್ನು ವಿಜೃಂಭಿಸಲಿ ಅಲಂಕಾರಿಕ ವಸ್ತುಗಳು, ಪಟಾಕಿ ಸಿಡಿಸಲು ಸಜ್ಜಾಗಿರುವ ಜನರು ಖರೀದಿಗೆ ಮುಗಿಬಿದ್ದಿದ್ದಾರೆ.
ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ಇಲ್ಲದಿರುವದರಿಂದ ಆಲಮಟ್ಟಿ ಮತ್ತು ನಿಡಗುಂದಿಯಲ್ಲಿ ಭಾನುವಾರದಿಂದ ಮಳಿಗೆಗಳು ಆರಂಭವಾಗಿವೆ. ಸೋಮವಾರ ಈ ಮಳಿಗೆಗಳಲ್ಲಿ ಖರೀದಿ ಜೋರಾಗಿ ನಡೆಯಿತು.
ಪಟಾಕಿ ಅವಘಡಗಳಿಂದ ಎಚ್ಚೆತ್ತ ಸರ್ಕಾರ ಮಾರಾಟಕ್ಕೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಕಂದಾಯ, ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ, ಪೊಲೀಸ್ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಟಾಕಿ ಮಾರಾಟಕ್ಕೆ ಮಾರ್ಗಸೂಚಿಗಳನ್ನು ರೂಪಿಸಿವೆ.
ಅಗ್ನಿನಂದಕ ಉಪಕರಣಗಳ ಬಳಕೆಯ ತರಬೇತಿ ಪಡೆದ ವರ್ತಕರಿಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರೂ ಎಲ್ಲಾ ಅಂಗಡಿಕಾರರು ಎಗ್ಗಿಲ್ಲದೇ ಮಾರಾಟದಲ್ಲಿ ತೊಡಗಿದ್ದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿಗೆ ಅವಕಾಶ ಕಲ್ಪಿಸಲಾಗಿದೆ. ಪಟಾಕಿಯ ಬಾಕ್ಸ್‌ಗಳಿಗೆ ₹ 400ರಿಂದ ₹ 1,500ರವರೆಗೆ ಬೆಲೆ ಇದೆ. ಹೂಕುಂಡ, ಭೂಚಕ್ರ, ರಾಕೆಟ್, ಸುರ್‌ಸುರ್ ಬತ್ತಿ ಸೇರಿ ತರಹೇವಾರಿ ಪಟಾಕಿಗಳು ಮಳಿಗೆಗಳಲ್ಲಿವೆ. ಪಟಾಕಿ ಬೆಲೆ ಕಳೆದ ವರ್ಷಕ್ಕಿಂತ ತುಸು ಹೆಚ್ಚಾಗಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಸಾಧ್ಯತೆ ಇದೆ. ಬಲಿಪಾಡ್ಯಮಿ ಮುಗಿಯುವವರೆಗೂ ಪಟಾಕಿ ಸದ್ದು ಕೇಳಲಿದೆ.
ಚೀನಿಹಣತೆಯತ್ತ ಗಮನ: ಈ ಮೊದಲು ಸ್ಥಳೀಯ ಕುಂಬಾರರು ಮಾಡಿದ ಮಣ್ಣಿನ ಹಣತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದ ಜನರು, ಈಗ ಚೀನಿ ಮಣ್ಣಿನಿಂದ ತಯಾರಿಸಿದ ಹಣತೆ ಮತ್ತು ಲೋಹದ ಹಣತೆಯತ್ತ ಜನರು ಹೆಚ್ಚು ಒಲವು ತೋರುತ್ತಿರುವದು ಕಂಡುಬಂತು.
ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಠಿಗೆ ಮುಂಗಾರು ಬೆಳೆ ಹಾನಿಯಾದರೂ ಕೂಡ ರೈತರು ಹಿಂಗಾರು ಬೆಳೆಯಾದರೂ ಉತ್ತಮ ಫಸಲು ಬರಲಿ ಎಂದು ಪ್ರತಿ ಬಾರಿಯೂ ಅಭೂತಪೂರ್ವ ದೀಪಾವಳಿ ಆಚರಿಸಿದರು.
ತುಂಬಿದ ದೇವಸ್ಥಾನ: ಆಲಮಟ್ಟಿಯ ಚಂದ್ರಮ್ಮದೇವಿ, ಅನ್ನದಾನೇಶ್ವರ ಮಠ, ಸಿದ್ಧಲಿಂಗೇಶ್ವರ ತಪೋಮಂದಿರ ಹಾಗೂ ಯಲಗೂರ ಗ್ರಾಮದ ಯಲಗೂರೇಶ್ವರ ಮತ್ತು ಯಲ್ಲಮ್ಮನ ಬೂದಿಹಾಳದ ರೇಣುಕಾ ಯಲ್ಲಮ್ಮನ ದೇವಸ್ಥಾನಗಳಲ್ಲಿ ಮಂಗಳವಾರ ಮುಂಜಾನೆ ಭಕ್ತರಿಂದ ದೇವಸ್ಥಾನಗಳು ತುಂಬಿದ್ದವು.ಯಲಗೂರ ಗ್ರಾಮದ ಯಲಗೂರೇಶ್ವರ ದೇವಸ್ಥಾನದ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಪ್ರತಿ ಅಮವಾಸ್ಯೆಯಂದು ಅನ್ನದಾಸೋಹ ನಡೆಯುತ್ತದೆ.
ದೀಪಾವಳಿ ಅಮವಾಸ್ಯೆಯಂದು ನಡೆಯುವ ದಾಸೋಹ ವ್ಯವಸ್ಥೆಯನ್ನು ಬಾಗಲಕೋಟ ತಾಲ್ಲೂಕಿನ ಭಗವತಿ ಗ್ರಾಮದ ದಕ್ಷಾ ನಾಗರಾಜ ದೊಡಮನಿ ನಡೆಸಿಕೊಟ್ಟಿದ್ದಾರೆ ಎಂದು ಯಲಗೂರೇಶ್ವರ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ್ ಪಾತರದ ತಿಳಿಸಿದರು.