ಯಶಸ್ವಿ ಪ್ರದರ್ಶನ ಕಂಡ ಚಲನಚಿತ್ರ
ಇಂಡಿ : ಪಟ್ಟಣದ ಶ್ರೀನಿವಾಸ ಚಲನಚಿತ್ರ ಮಂದಿರದಲ್ಲಿ ಕಳೆದ ಡಿ.31 ರಿಂದ ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಫಿಲಂಸ್ ವತಿಯಿಂದ ಪ್ರದರ್ಶನಗೊಳ್ಳುತ್ತಿರುವ “ಪವಾಡ ಪುರುಷ ಲಚ್ಯಾಣ ಸಿದ್ದಲಿಂಗ ಮಹಾರಾಜ” ಎಂಬ ಕನ್ನಡ ಚಲನ ಚಿತ್ರವು ಆರಂಭದಲ್ಲೆ ಯಶಸ್ವಿ ಪ್ರದರ್ಶನ ಕಂಡಿದ್ದು 2 ನೇ ವಾರವು ಮುಂದುವರೆದಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ಶ್ರೀಧರ ಅವರು ಚರಿತ್ರೆಯ ನಾಯಕ ಸಿದ್ಧಲಿಂಗ ಮಹಾರಾಜರ ಪಾತ್ರಧಾರಿಯಾಗಿ ಅತ್ಯಂತ ಅರ್ಥಪೂರ್ಣವಾಗಿ ಅಭಿನಯಿಸಿ ಪ್ರೇಕ್ಷಕರಲ್ಲಿ ಭಕ್ತಿ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ ರೇವಮ್ಮಳ ಪಾತ್ರಧಾರಿಯಾಗಿ ನಟಿ ಕಾವ್ಯಾಗೌಡ, ಲಚ್ಚಪ್ಪನ ಪಾತ್ರಧಾರಿಯಾಗಿ ಉಮಾಶಂಕರ್, ತಾಯಿ ನಾಗಮ್ಮಳ ಪಾತ್ರಧಾರಿಯಾಗಿ ಆಶಾ , ಗುರು ಶಂಕರಲಿಂಗನ ಪಾತ್ರಧಾರಿಯಾಗಿ ಶೈಲೇಶ್, ಕೌದೆಪ್ಪ ಮಹಾರಾಜನ ಪಾತ್ರಧಾರಿಯಾಗಿ ಮೂರ್ತಿ, ಶ್ರೀಶೈಲ ಮಲ್ಲಿಕಾರ್ಜುನನ ಪಾತ್ರಧಾರಿಯಾಗಿ ಪದ್ಮ ಣ್ಣ ನರಸಣ್ಣವರ ಅತ್ಯಂತ ಮನೋಜ್ಞವಾಗಿ ಅಭಿನಯಿಸಿ ನೋಡುಗರನ್ನು ಒಂದು ಕ್ಷಣ ಆಧ್ಯಾತ್ಮಿಕ ಲೋಕಕ್ಕೆ ಕೊಂಡೊಯ್ದ ನೋಟ ಗಮನಾರ್ಹ.
ಬಂಥನಾಳದ ಪೂಜ್ಯ ಡಾ. ವೃಷಭಲಿಂಗ ಮಹಾಶಿವಯೋಗಿಗಳ ಕೃಪಾಶೀರ್ವಾದ ಹಳಿಂಗಳಿಯ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳ ಸಂಕಲ್ಪದಂತೆ ಕಳೆದ 2009 ರಿಂದ ಚಿತ್ರೀಕರಣ ಆರಂಭಗೊಂಡ ಚಲನ ಚಿತ್ರವು 3 ವರ್ಷದ ಅವಧಿಯ ಒಳಗಾಗಿ ತೆರೆ ಕಂಡು ಸಹಸ್ರಾರು ಪ್ರೇಕ್ಷ ಕರ ಮನ ಗೆದ್ದಿದೆ. ಪದ್ಮಣ್ಣ ನರಸಣ್ಣವರ ಚಿತ್ರ ಕಥೆ ಸಂಭಾಷಣೆ, ಸಾಹಿತ್ಯ ನಿರ್ದೇಶನದೊಂದಿಗೆ ಉತ್ತಮ ಸಂಗೀತ ಸಂಯೋಜನೆ, ಪರಿಣಿತ ಕಲಾವಿದರ ಪರಿಶ್ರಮದಲ್ಲಿ ಸಿದ್ದಪಡಿಸಿದ ಈ ಚಲನಚಿತ್ರವನ್ನು ಖ್ಯಾತ ಛಾಯಾಗ್ರಾಹಕ ಜಗನ್ ಬಾಬು ಅವರು ಅತ್ಯುತ್ತಮವಾಗಿ ಛಾಯಾಗ್ರಹಣ ಮಾಡಿರುವದನ್ನು ಇಲ್ಲಿ ಸ್ಮರಿಸಬಹುದು.
ಈ ಚಲನಚಿತ್ರವನ್ನು ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದು, ಇದನ್ನು ತಿಳಿದ ಬಂಥನಾಳ ಪೂಜ್ಯರು, ಹಳಿಂಗಳಿಯ ಪೂಜ್ಯರು ಹಾಗೂ ಚಲನಚಿತ್ರ ನಿರ್ಮಾಪಕರು ಒಗ್ಗೂಡಿ ಚರ್ಚಿಸಿ, ಮಾದ್ಯಮದವರ ವಿನಂತಿ ಮೇರೆಗೆ ಉತ್ತಮ ಜೀವನ ರೂಪಿಸುವ ಆಧ್ಯಾತ್ಮಿಕ ಚಲನ ಚಿತ್ರವನ್ನು ಮುಖ್ಯವಾಗಿ ಮಕ್ಕಳು ವೀಕ್ಷಿಸಲಿ ಎಂಬ ಉದ್ದೇಶದಿಂದ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಟಿಕೆಟ್ ದರವನ್ನು ಅರ್ಧಕ್ಕೆ ನಿಗಧಿಪಡಿಸಿರುವದು ಇಲ್ಲಿನ ಮತ್ತೊಂದು ವಿಶೇಷ.
ಒಟ್ಟಾರೆಯಾಗಿ ತಾಲ್ಲೂಕಿನ ವಿವಿಧ ಗ್ರಾಮದ ಜನರು ನಿತ್ಯದ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ನಾ ಮುಂದು ತಾ ಮುಂದು ಎನ್ನುವಂತೆ ಚಿತ್ರಮಂದಿರಕ್ಕೆ ಸಾರಿಗೆ ಬಸ್, ಖಾಸಗಿ ವಾಹನದ ಮೂಲಕ ಆಗಮಿಸಿ, ಟಿಕೆಟ್ ಖರೀದಿಸಿ ಚಲನ ಚಿತ್ರ ವಿಕ್ಷಿಸುತ್ತಿರುವದು ಈಗಿನ ನಿತ್ಯದ ಸಾಮಾನ್ಯ ನೋಟವಾಗಿದೆ. ಇಂಥಹ ಈ ಚಲನ ಚಿತ್ರವು 100 ದಿನ ಯಶಸ್ವಿ ಪ್ರದರ್ಶನಗೊಳ್ಳಲಿ ಎಂಬುದು ಹಲವರ ಹೆಬ್ಬಯಕೆಯಾಗಿದೆ.
ಚಿತ್ರ ಮಂದಿರದಲ್ಲಿ ಈ ಚಲನಚಿತ್ರವನ್ನು ವೀಕ್ಷಿಸುವಾಗ ಅನುಭಾವದ ಜೊತೆಗೆ ಧನಾತ್ಮಕತೆ ಉಂಟಾಗುತ್ತದೆ. ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ಆಧ್ಯಾತ್ಮಿಕತೆ, ನುಡಿ ಸತ್ಯತೆಯ ಬಗ್ಗೆ ಅನುಭೂತಿಗೊಂಡು ಧನ್ಯತಾಭಾವ ಮೂಡುತ್ತದೆ. ಎಲ್ಲರೂ ಕುಟುಂಬದೊಂದಿಗೆ ನೋಡಲೇಬೇಕಾದ ಅತ್ಯುತ್ತಮ ಚಲನ ಚಿತ್ರ.
ಡಿ.ಎ. ಮುಜಗೊಂಡ
ಚಲನ ಚಿತ್ರ ವೀಕ್ಷಕ ಹಾಗೂ ಅರಣ್ಯ ಇಲಾಖೆಯ ನೌಕರ.