ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ
ಇಂಡಿ: “ವಿದ್ಯಾರ್ಥಿಗಳ ಅರ್ಥಪೂರ್ಣ ಕಲಿಕೆಗೆ ಪೋಷಕರ- ಶಿಕ್ಷಕರ ನಡುವೆ ಉತ್ತಮ ಸಂವಹನ ಅತ್ಯಗತ್ಯ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲೆ, ಪೋಷಕರು, ಶಿಕ್ಷಕರು ಸಮಾನ ಬಲದಿಂದ ನಿಲ್ಲಬೇಕು”ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಅಲ್ಲಾಭಕ್ಷ ಮಕಾನದಾರ ಹೇಳಿದರು. ಶುಕ್ರವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ‘ಪೋಷಕ-ಶಿಕ್ಷಕರ ಮಹಾಸಭೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತರಗತಿಯಲ್ಲಿ ಮಕ್ಕಳ ವರ್ತನೆ, ಮನೆಯಲ್ಲಿ ಅವರ ಅಧ್ಯಯನ ಪರಿಸ್ಥಿತಿ ಹಾಗೂ ಪೋಷಕರ ಕಾಳಜಿ-ಇವು ಮಗುವಿನ ಬೆಳವಣಿಗೆಯಲ್ಲಿ ತುಂಬಾ ಮುಖ್ಯವಾಗಿವೆ ಎಂದು ಹೇಳಿದರು. ಶಿಕ್ಷಕ ಸಂತೋಷ ಬಂಡೆ ಮಾತನಾಡಿ,“ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣದಲ್ಲಿ ಪೋಷಕರ ಸಹಕಾರ ತುಂಬಾ ಮುಖ್ಯ. ಈ ಸಭೆಯು ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಮಾನಸಿಕ ಬೆಳವಣಿಗೆಗೆ ಮಾರ್ಗದರ್ಶಕ ವೇದಿಕೆಯಾಗಿದೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರೇರೂಗಿ ಉರ್ದು ಕ್ಲಸ್ಟರ್ ಸಿ ಆರ್ ಪಿ ಬಾದಶಾ ಚಪ್ಪರಬಂದ ಮಾತನಾಡಿ, “ನಮ್ಮ ಪೋಷಕರು ಮತ್ತು ಶಿಕ್ಷಕರು ಒಂದೇ ವೇದಿಕೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸುತ್ತಿರುವುದು ನಮಗೆ ಆತ್ಮವಿಶ್ವಾಸ ಮತ್ತು ಪ್ರೇರಣೆಯನ್ನು ನೀಡುತ್ತದೆ” ಎಂದು ಹೇಳಿದರು.
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ಕುರಿತು ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಸಾಧಕ 20 ಜನ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಮಹಿಬೂಬ ಅಂಗಡಿ,
ಮಹಮ್ಮದ್ ಮಕಾನದಾರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಭಾರತದ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಅಬ್ದುಲ ಜಬ್ಬಾರ ಬಾಗವಾನ, ಭಾಷಾಸಾಬ್ ಅಂಗಡಿ, ಇಬ್ರಾಹಿಂ ನದಾಫ್, ಸಲೀಂ ಮಕಾನದಾರ, ವಕೀಲ ಬಾಗವಾನ, ಜಾವೀದ್ ಅಂಗಡಿ, ಜಾವೀದ್ ಬಾಗವಾನ ಸೇರಿದಂತೆ ಎಸ್ ಡಿ ಎಂ ಸಿ ಸದಸ್ಯರು, ಪಾಲಕರು, ತಾಯಂದಿರು, ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.



















