ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ
ವಿಜಯಪುರ, ನ.13 : ಸರ್ಕಾರಿ ಶಾಲೆಗಳು ಮತ್ತು ಕಾಲೇಜಿನ ಎಲ್ಲಾ ಅರ್ಹ ವಯಸ್ಸಿನ ಮಕ್ಕಳಿಗೆ ಒಳಗೊಳ್ಳುವಿಕೆ, ಪ್ರವೇಶಾವಕಾಶ ಮತ್ತು ಸಮಾನತೆಯ ಮೂಲಕ ಶಿಕ್ಷಣವನ್ನು ಒದಗಿಸುತ್ತವೆ. ಸರ್ಕಾರಿ ಶಾಲಾ-ಕಾಲೇಜುಗಳು ಎಸ್.ಡಿ.ಎಂ.ಸಿ.,ಸಿ.ಡಿ.ಸಿ. ಮತ್ತು ಒಟ್ಟಾರೆ ಸಮುದಾಯದ ಹಿತಾಸಕ್ತಿಗಳ ಫಲಶೃತಿಯಾಗಿವೆ. ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳ ಎಲ್ಲಾ ಪ್ರಮುಖ ಪಾಲುದಾರರನ್ನು ತಲುಪಲು ನವೆಂಬರ್ 14ರಂದು ಮಕ್ಕಳ ದಿನಾಚಾರಣೆಯ ಪ್ರಯುಕ್ತ ರಾಜ್ಯಾದ್ಯಂತ ಏಕಕಾಲದಲ್ಲಿ 2025-26ನೇ ಸಾಲಿನ ಪೋಷಕ-ಶಿಕ್ಷಕರ ಮಹಾಸಭೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಆಯೋಜಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಶಾಲಾ-ಕಾಲೇಜುಗಳ ಬಗ್ಗೆ, ಪೋಷಕರಲ್ಲಿ ಭರವಸೆಯನ್ನು ಹೆಚ್ಚಿಸುವ ಮಹತ್ತರವಾದ ಗುರಿಯೊಂದಿಗೆ ಈ ಸಭೆಯನ್ನು ಆಯೋಜಿಸಲಾಗಿದೆ. ಆದಕಾರಣ, ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಕರೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಷ್ಟ್ರ ನಿರ್ಮಾಣ ಮತ್ತು ಚೈತನ್ಯಶೀಲ ಸಮಾಜ ನಿರ್ಮಾಣದ ಸಾಕಾರಕ್ಕಾಗಿ ಅರ್ಹ ವಯೋಮಾನದ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿ, ನಿರಂತರವಾಗಿ ಹಾಜರಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅತ್ಯಗತ್ಯವಾಗಿರುತ್ತದೆ. ಮಕ್ಕಳ ಕಲಿಕೆಯು ಶಾಲೆ, ಮನೆ ಮತ್ತು ಸಮಾಜಗಳ ನಡುವೆ ನಿರಂತರ ಸಂಪರ್ಕವನ್ನು ಕಲ್ಪಿಸುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಅವರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿರುತ್ತದೆ. ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರದಿಂದ ಅನುಷ್ಠಾನಿಸಲಾಗಿರುವ ಉಪಕ್ರಮಗಳು, ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವುದು ಪೋಷಕ ಶಿಕ್ಷಕ ಸಭೆಗಳ ಉದ್ದೇಶವಾಗಿದೆ.
ಈಗಾಗಲೇ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪೋಷಕ ಶಿಕ್ಷಕರ ಮಹಾಸಭೆ ನಡೆಸುವ ಬಗ್ಗೆ, ಸೂಕ್ತ ಮಾರ್ಗದರ್ಶನ ಮಾಡಲಾಗಿದ್ದು, ಈಗಾಗಲೇ ಪ್ರತಿ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಅಂದು ಶಿಕ್ಷಕರ ಜೊತೆಗೆ ಪಾಲಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಮಾರ್ಗದರ್ಶನ ಮಾಡಲು ವಿನಂತಿಸಿದ್ದಾರೆ.
ಶಾಲಾ/ಕಾಲೇಜಿನ ಒಟ್ಟಾರೆ ದಾಖಲಾತಿಯು 80ಕ್ಕಿಂತ ಕಡಿಮೆ ಇದ್ದಲ್ಲಿ ಎಲ್ಲಾ ಪೋಷಕರನ್ನೂ ಮಹಾಸಭೆಗೆ ಆಹ್ವಾನಿಸುವುದು. 80ಕ್ಕಿಂತ ಹೆಚ್ಚು ದಾಖಲಾತಿ ಹೊಂದಿರುವ ಶಾಲಾ/ಕಾಲೇಜುಗಳಲ್ಲಿ ಸ್ಥಳಾವಕಾಶದ ಲಭ್ಯತೆಯನ್ನಾಧರಿಸಿ ಪಾಲಕರನ್ನು ಸಭೆಗೆ ಆಹ್ವಾನಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅದರ ಜೊತೆಗೆ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ,ಸಭೆಯಲ್ಲಿ ಅಭಿನಂದಿಸುವುದು. ಜೊತೆಗೆ ಅಂದು ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಪಾಲಕರನ್ನು ಆಕರ್ಷಣೆ ಮಾಡಲು, ಸಭೆಯ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡುವುದು.
ಶಾಲೆಗೆ ಬರುವ ಪಾಲಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಅವರಿಗೆ ಯಾವದೇ ರೀತಿÀಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಅವರು ಸಂಬAದಿಸಿದ ಅಧಿಕಾರಿಗಳಿಗೆ ತಿಳಿಸಿರುತ್ತಾರೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷಾ ಸಿದ್ಧತೆಗೆ ಅನುಕೂಲಿಸಲು ಇಲಾಖೆಯಿಂದ ನೀಡಲಾಗಿರುವ ಅಧ್ಯಾಯವಾರು-ವಿಷಯವಾರು ನೀಲನಕ್ಷೆ ಪ್ರಶ್ನೆ ಕೋರಿ ಮಾದರಿ ಪ್ರಶ್ನೆಪತ್ರಿಕೆಗಳು, ಮೌಲ್ಯಮಾಪನ ವಿಧಾನ ನಡೆಸಲಾಗುತ್ತಿರುವ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳು, ಎರಡು ಅಂತಿಮ ಪರೀಕ್ಷೆಗಳನ್ನು ನಡೆಸುತ್ತಿರುವ ಬಗ್ಗೆ, ಪೋಷಕರಿಗೆ ಮಾಹಿತಿ ನೀಡುವುದು, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಆತಂಕ ನಿವಾರಣೆ ಏಕಾಗ್ರತೆ ಮಾನಸಿಕ ಒತ್ತಡ ನಿರ್ವಹಣೆಗಳ ಬಗ್ಗೆ ತಜ್ಞರಿಂದ ಸಂವಾದ-ಪ್ರೇರಣಾ ಕಾರ್ಯಕ್ರಮಗಳನ್ನು ಇಲಾಖೆಯಿಂದ ಆಯೋಜಿಸುತ್ತಿರುವ ಬಗ್ಗೆ ಪೋಷಕರಿಗೆ ತಿಳಿಸುವುದು ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳುವುದು. ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಕಲಿಕೆ ಉತ್ತಮಪಡಿಸಲು ಇಲಾಖೆಯಿಂದ ಹಮ್ಮಿಕೊಂಡಿರುವ ಕಲಿಕಾ ಉಪಕ್ರಮಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವುದು. ಶಾಲಾ-ಕಾಲೇಜುಗಳಲ್ಲಿ ಲಭ್ಯಗೊಳಿಸಿರುವ ಭೌತಿಕ ಸೌಕರ್ಯಗಳು ಮತ್ತು ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು.
ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಶಾಲಾ-ಕಾಲೇಜುಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಿ ಹೆಚ್ಚುವರಿ ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಷನ್ ಸಹಯೋಗದೊಂದಿಗೆ ವಾರಕ್ಕೆ 06 ದಿನಗಳು ಮೊಟ್ಟೆ/ಬಾಳೆಹಣ್ಣು ಮತ್ತು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದೊಂದಿಗೆ ವಾರಕ್ಕೆ 05 ದಿನಗಳು ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ನೀಡುತ್ತಿರುವ ಕುರಿತಾಗಿಯೂ ಪೋಷಕರಿಗೆ ಮಾಹಿತಿ ನೀಡುವುದು. ಮಕ್ಕಳ ಹಕ್ಕುಗಳು, ಆರ್.ಟಿ.ಇ. ಕಾಯ್ದೆ, ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಿಕ್ಷಣ, ಮಕ್ಕಳ ರಕ್ಷಣಾ ನೀತಿ ಮತ್ತು ಫೊಕ್ಷೆÆÃ ಕಾಯ್ದೆ ಕುರಿತು ಪೋಷಕರಲ್ಲಿ ಅರಿವು ಮೂಡಿಸುವುದು. ಮಕ್ಕಳು ಶಾಲೆಯಿಂದ ಹೊರಗುಳಿಯುವ ಹಾಗೂ ಗೈರುಹಾಜರಾಗುವ ಕುರಿತಾಗಿ, ಬಾಲ ಕಾರ್ಮಿಕರು ಮತ್ತು ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಷಕರ ಜವಾಬ್ದಾರಿಗಳ ಕುರಿತಾಗಿ ಅರಿವು ಮೂಡಿಸುವುದು. ಪೋಷಕರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಆಗತ್ಯತೆಗನುಸಾರವಾಗಿ ಶಾಲಾಭಿವೃದ್ಧಿ ಹಾಗೂ ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚರ್ಚಿಸುವುದು.
ಒಟ್ಟಾರೆಯಾಗಿ ಈ ಮಹಾಸಭೆಯು ಸರಕಾರಿ ಶಾಲೆಗಳ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಯ ದೃಷ್ಠಿಕೋನದಿಂದ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದ್ದಾರೆ.


















