ರಾಯಚೂರು: ಓಪೆಕ್ ಆಸ್ಪತ್ರೆಯಲ್ಲಿ ನಿಯಮಾವಳಿಗಳ ಉಲ್ಲಂಘನೆ ಮತ್ತು ಯಂತ್ರೋಪಕರಣಗಳ ಬಗ್ಗೆ ತನಿಖೆ ನಡೆಸಿ, ಓಪೆಕ್ ಮುಖ್ಯಸ್ಥರಾದ ಗದ್ವಾಲ್ ನಾಗರಾಜ ಅವರನ್ನು ಈ ಸ್ಥಾನದಿಂದ ಉಚ್ಛಾಟಿಸುವಂತೆ ಸಾರ್ವಜನಿಕ ಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾ ಸಮಿತಿಯ ಸಂಚಾರಕರಾದ ಅಂಬಾಜಿ ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಓಪೆಕ್ ಆಸ್ಪತ್ರೆಯಲ್ಲಿ ಕರ್ನಾಟಕ ಸರ್ಕಾರದ ನಡಾವಳಿ ಪಾಲನೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಈಗಾಗಲೇ ಜನ ಬಳಕೆಯ ಔಷಧಿಗಳನ್ನು ಗುಂಡಿಯಲ್ಲಿ ಮುಚ್ಚುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ದೂರು ನೀಡಲಾಗಿತ್ತು. ಆದರೆ, ಇಲ್ಲಿವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಉತ್ಪಾದನಾಧರಿತ ಉತ್ತೇಜನೆ ನೀಡಲು ಗರಿಷ್ಟ ಪ್ರೋತ್ಸಾಹಧನ ನೀಡಲು ಸರ್ಕಾರದಿಂದ ಅನುದಾನ ಬಿಡುಗಡೆಗೊಂಡಿದ್ದರೂ, ಸಂಬಂಧಪಟ್ಟ ಸಿಬ್ಬಂದಿಗೆ ಹಣ ವಿತರಣೆಗೊಳಿಸಿಲ್ಲ.ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಮರು ಪಾವತಿಯ ಮೊತ್ತವನ್ನು ಶೇ.೧೦ ರಿಂದ ೩೦ ರವರೆಗೆ ಹೆಚ್ಚಿಸಿ, ವಿತರಿಸಲು ಸೂಚಿಸಲಾಗಿದೆ. ೩೦-೪-೨೦೧೯ ರಂದು ಈ ಆದೇಶ ಹೊರಡಿಸಲಾಗಿದೆ. ಆದರೆ, ಇಲ್ಲಿವರೆಗೂ ಈ ಹಣ ಪಾವತಿಸಿಲ್ಲವೆಂದು ಅವರು ಆರೋಪಿಸಿದರು. ರಿಮ್ಸ್ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ವಿಶೇಷಾಧಿಕಾರಿಗಳು ಬಹಿರಂಗವಾಗಿಯೇ ಕಮಿಷನ್ ಕೇಳಿದ್ದಾರೆಂದು ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಉಲ್ಲಂಘಿಸುವ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಹಣ ವಿತರಣೆಗೆ ಸಂಬಂಧಿಸಿ ತಾರತಮ್ಯ ವೆಸಗಿದ ಡಾ.ಗದ್ವಾಲ್ ನಾಗರಾಜ ಅವರನ್ನು ವಿಶೇಷಾಧಿಕಾರಿ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ, ಪರಶುರಾಮ, ಸೈಯದ್ ಖೈಸರ್ ಹುಸೇನಿ, ಆಂಜಿನೇಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.