ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರೇ ನಿಜವಾದ ಯುಜಿಸಿ ವೇತನ ಪಡೆಯಲು ಅರ್ಹರು : ಪ್ರಾಧ್ಯಾಪಕ ಡಾ.ವಿಷ್ಣು ಸಿಂಧೆ
ಮುದ್ದೇಬಿಹಾಳ: ೧-೧೨ನೇ ತರಗತಿವರೆಗೆ ಮೂಲ ಶಿಕ್ಷಣ ನೀಡಿ ಫೌಂಡೇಶನ್ ಗಟ್ಟಿಗೊಳಿಸುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರೇ ನಿಜವಾದ ಯುಜಿಸಿ ವೇತನ ಪಡೆಯಲು ಅರ್ಹರಾಗಿದ್ದಾರೆ ಎಂದು ಮಹಿಳಾ ವಿವಿಯ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ವಿಷ್ಣು ಸಿಂಧೆ ಹೇಳಿದರು.
ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಗುರುವಾರ ಶಿಕ್ಷಕರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಶಿಕ್ಷಕರ ದಿನಾಚರಣೆ ಶಿಕ್ಷಕರ ಸಮಸ್ಯೆಗಳು, ಒತ್ತಡಗಳು, ಆತಂಕಗಳು, ಆರೋಗ್ಯ, ಸೌಲಭ್ಯಗಳ ವಿಶ್ಲೇಷಣೆಯ ವೇದಿಕೆಯಾಗಬೇಕು. ಶಿಕ್ಷಕರಲ್ಲಿ ಆತಂಕ, ಕೊರತೆ, ಒತ್ತಡ ಇದ್ದಾಗ ಅವರಿಂದ ಗುಣಮಟ್ಟದ ಶಿಕ್ಷಣ ಸಾಧ್ಯವಿಲ್ಲ. ಬೇರೆ ಇಲಾಖೆ ಕೆಲಸಗಳಿಗೆ ಶಿಕ್ಷಕರ ಬಳಕೆ ಹೊರೆಯಾಗಿದೆ ಎಂದರು.
ಗೂಗಲ್ ಇರುವಾಗ ಗುರು ಏಕೆ ಬೇಕೆಂದು ಪ್ರಶ್ನಿಸುವಷ್ಟು ಬದಲಾವಣೆಯಾಗಿದೆ. ಈ ಪ್ರಶ್ನೆ ಮಕ್ಕಳಲ್ಲಿ ಮೂಡುವುದಕ್ಕೂ ಮುಂಚೆಯೇ ಶಿಕ್ಷಕರು ಎಚ್ಚೆತ್ತುಕೊಳ್ಳಬೇಕು. ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳು ರಾಜ್ಯದಲ್ಲೇ ಹೆಚ್ಚು ಭ್ರೂಣಹತ್ಯೆ, ಬಾಲ್ಯ ವಿವಾಹ ನಡೆಯುವ ಜಿಲ್ಲೆಗಳೆನಿಸಿಕೊಂಡಿವೆ. ಶಿಕ್ಷಕರು ಇವುಗಳನ್ನು ತಡೆಗಟ್ಟಲು ಜಾಗೃತಿ ಮೂಡಿಸಿ ಸಾಮಾಜಿಕ ಜಾಗೃತಿಯ ಭಾಗವಾಗಿ ಮೌಢ್ಯ ತಿದ್ದಲು ಮುಂದಾಗಬೇಕು ಎಂದರು.
ದಿವ್ಯಸಾನಿಧ್ಯವಹಿಸಿ ಜ್ಯೋತಿ ಬೆಳಗಿಸಿ ಆಶಿರ್ವಚನ ನೀಡಿದ ಕುಂಟೋಜಿ ಭಾವೈಕ್ಯತಾ ಮಠದ ಡಾ.ಶ್ರೀಗುರು ಚನ್ನವೀರ ಶಿವಾಚಾರ್ಯರು, ರಾಷ್ಟಿçÃಯ ಶಿಕ್ಷಣ ನೀತಿ ಪಾಲನೆಯಾದರೆ ನಮ್ಮ ದೇಶ ವಿದೇಶಗಳೊಂದಿಗೆ ಪೈಪೋಟಿ ನೀಡಬಹುದು. ಸಂಬಳಕ್ಕೆ ನ್ಯಾಯಕೊಡುವ ಹಾಗೆ ಶಿಕ್ಷಕರು ಸೇವೆ ಸಲ್ಲಿಸಬೇಕು. ಶಿಕ್ಷಣ ಮಕ್ಕಳಿಗೆ ತಲುಪುತ್ತದೆಯೋ, ಇಲ್ಲವೋ ಅನ್ನೋದನ್ನು ಗಮನಿಸುತ್ತಿರಬೇಕು. ಇತ್ತೀಚಿನ ಗುರುಗಳು ಗುರುಕುಲ ಮರೆತಿದ್ದಾರೆ. ನಿವೃತ್ತ ಶಿಕ್ಷಕರು ಮಾರ್ಗದರ್ಶಕರಾಗಿ ಆಧ್ಯಾತ್ಮದ ಜೀವನ ಮುಂದುವರೆಸಬೇಕು ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ, ಅಕ್ಷರದಾಸೋಹ ಯೋಜನೆಯ ಎಡಿ ಡಾ.ಎಂ.ಎಂ.ಬೆಳಗಲ್ಲ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಕಟ್ಟಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪಾಟೀಲ, ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಂ.ಎಸ್.ಕವಡಿಮಟ್ಟಿ, ರಾಜಶೇಖರ ಮೇಗೇರಿ, ರವಿ ನಾಯಕ, ಮೀನಾ ಕುಂಟೋಜಿ, ಎಸ್.ಎಸ್.ಲಮಾಣಿ, ಎಂ.ಕೆ.ಬಾಗವಾನ, ರಾಘು ಹೂಲಗೇರಿ, ಬಿ.ಟಿ.ವಜ್ಜಲ್, ಬಸಯ್ಯ ಹಿರೇಮಠ, ಆರ್.ಜಿ.ರಾಠೋಡ, ರಾವತ್ ಪೂಜಾರಿ, ಎ.ಎಸ್.ಬಾಗವಾನ, ವೆಂಕೋಬಾ ನಾಯ್ಕೋಡಿ, ಬಿ.ಜಿ.ದೊಡಮನಿ, ಎಚ್.ಎಂ.ತಮದಡ್ಡಿ, ಎಸ್.ಎನ್.ಲಿಂಗದಳ್ಳಿ, ಎಚ್.ಎನ್.ಭೋವಿ, ಕೆ.ಬಿ.ಸಜ್ಜನ, ಮಹಾದೇವಿ ವಾಲಿ ಇನ್ನಿತರರು ವೇದಿಕೆಯಲ್ಲಿದ್ದರು.
ಮಾನ್ವಿ ಹತ್ತಿರ ಶಾಲಾ ಬಸ್ ಅಪಘಾತದಲ್ಲಿ ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ಶಿಕ್ಷಕ ಮಂಡ್ಯದ ತಿಲಕ್ ಸ್ವರಚಿತ ರಾಧಾಕೃಷ್ಣನ್‌ರ ಭಾವಚಿತ್ರವನ್ನು ಬಿಇಓಗೆ ಹಸ್ತಾಂತರಿಸಿದರು. ಅಕಾಲಿಕವಾಗಿ ಮೃತಪಟ್ಟ ಶಿಕ್ಷಕರ ಕುಟುಂಬದವರನ್ನು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಡಾ.ರಾಧಾಕೃಷ್ಣನ್, ಸಾವಿತ್ರಿಬಾಯಿ ಪುಲೆ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿ ನಾಡಗೀತೆ ನಡೆಸಿಕೊಟ್ಟರು. ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಸ್ವಾಗತಿಸಿದರು. ಬಿಇಓ ಬಿ.ಎಸ್.ಸಾವಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಆರ್‌ಪಿ ಗುಂಡು ಚವ್ಹಾಣ, ಎಂ.ಡಿ.ಅಮರಾವದಗಿ, ಬಿಆರ್‌ಪಿ ಸಿದ್ದನಗೌಡ ಬಿಜ್ಜೂರ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಕರ ದಿನಾಚರಣೆ ಸಮಿತಿ ಅಧ್ಯಕ್ಷ ತಾಪಂ ಇಓ ಎನ್.ಎಸ್.ಮಸಳಿ, ಉಪಾಧ್ಯಕ್ಷ, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ತಾಳಿಕೋಟೆ ತಹಶೀಲ್ದಾರ್ ಕೀರ್ತಿ ಚಾಲಕ, ತಾಪಂ ಇಓ ವೆಂಕಟೇಶ ವಂದಾಲ ಗೈರಾಗಿದ್ದು ಚರ್ಚೆಯ ವಿಷಯವಾಯಿತು. ಕಟ್ಟಿಮನಿಯವರು ಶಿಕ್ಷಕರ ದಿನಾಚರಣೆ ನಿಮ್ಮದು ನೀವೇ ಆಚರಿಸಿಕೊಳ್ಳಿ ಎಂದು ಬೇಜವಾಬ್ಧಾರಿ ಮಾತುಗಳನ್ನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದಕ್ಕೆ ಟೀಕೆ ವ್ಯಕ್ತವಾಯಿತು. ಶಾಸಕ ಸಿ.ಎಸ್.ನಾಡಗೌಡರು ಅನಾರೋಗ್ಯ ಹಿನ್ನೆಲೆ ಗೈರಾದರೂ ಸಂದೇಶ ಕಳಿಸಿ ಶುಭ ಕೋರಿದ್ದರು.