ಕಲುಷಿತ ನೀರು ಪೂರೈಕೆಗೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆ : ಸಿಇಓ ರಿಷಿ ಆನಂದ
ವಿಜಯಪುರ: ಜೂನ್ 19 Voice of Janata:
ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಮುನ್ನ ಗುಣಮಟ್ಟವನ್ನು ಪರೀಕ್ಷೆ ಮಾಡಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಕಲುಷಿತ ನೀರು ಪೂರೈಕೆಯಾದಲ್ಲಿ ಗ್ರಾ.ಪಂ ಪಿಡಿಒ, ತಾ.ಪಂ ಇಒ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಹೊಣೆಗಾರನ್ನಾಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ತಿಳಿಸಿದರು.
ಬುಧವಾರ ತಾಳಿಕೋಟೆ ತಾಲೂಕಿನ ನಾವದಗಿ, ಮಿಣಜಗಿ ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಉಂಟಾಗಿ ಜನರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಜಿ.ಪಂ ಸಿಇಓ ಅವರು ಭೇಟಿ ನೀಡಿ, ನಾವದಗಿ ಮತ್ತು ಮಿಣಜಗಿ ಗ್ರಾಮಗಳಲ್ಲಿನ ಕುಡಿಯುವ ನೀರಿನ ಬೋರವೆಲ್, ಬಾವಿಗಳು, ಓವರ್ ಹೆಡ್ ಟ್ಯಾಂಕ್ ಮತ್ತು ಗ್ರಾಮಗಳಲ್ಲಿನ ಚರಂಡಿಗಳನ್ನು ವೀಕ್ಷಣೆ ಮಾಡಿ, ಕುಡಿಯುವ ನೀರಿನ ಮೂಲಗಳ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಗ್ರಾಮಗಳಲ್ಲಿನ ಚರಂಡಿಗಳನ್ನು ಪ್ರತಿದಿನ ಸ್ವಚ್ಛಗೊಳಿಸುವುದು, ಕುಡಿಯಲು ಯೋಗ್ಯವಲ್ಲದ ನೀರಿನ ಮೂಲಗಳನ್ನು ಬಂದ್ ಮಾಡಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು, ನಿರಂತರವಾಗಿ ನೀರಿನ ಗುಣಮಟ್ಟ ಪರೀಕ್ಷೆಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಸರಬರಾಜು ಮಾಡುವ ಮೊದಲು ಕಡ್ಡಾಯವಾಗಿ ನೀರಿನ ಗುಣಮಟ್ಟದ ಬಗ್ಗೆ ಪರೀಕ್ಷಿಸಿದ ನಂತರ ನೀರನ್ನು ಸರಬರಾಜು ಮಾಡುವುದು, ಒಂದು ವೇಳೆ ನೀರು ಕುಡಿಯಲು ಯೋಗ್ಯವಾಗಿಲ್ಲದಿದ್ದರೆ ತಕ್ಷಣ ಅಂತಹ ನೀರನ್ನು ಸರಬರಾಜು ಮಾಡುವುದನ್ನು ನಿಲ್ಲಿಸಿ ತುರ್ತಾಗಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಹಾಗೂ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಮತ್ತು ಎಚ್ಚರಿಕೆ ನೀಡಿದರು.
ತಾಳಿಕೋಟಿ ತಾಲೂಕಿನ ಕೊಡಗಾನೂರ ಗ್ರಾಮ ಪಂಚಾಯತಿ ನಾವದಗಿ ಗ್ರಾಮ ಮತ್ತು ಮಿಣಜಗಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಕುರಿತು ಪರಿಶೀಲನೆ ನಡೆಸಿದರು. ಸಾರ್ವಜನಿಕ ಬಾವಿಗಳಿಗೆ ಫೆನ್ಸಿಂಗ್(ತಂತಿ ಬೇಲಿ) ಅಳವಡಿಸಬೇಕು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು, ಸಾರ್ವಜನಿಕರಿಗೆ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಳಿಕೋಟಿ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಗ್ರಾಮಗಳಲ್ಲಿ ಯಾವುದೇ ತೊಂದರೆಗಳು ಹಾಗೂ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುವುದು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಲೋಪದೋಷಗಳು ಕಂಡು ಬಂದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ, ತಾಳಿಕೋಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಕುರಿತು ವಿಚಾರಿಸಿದರು.ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ. ಆರ್. ಬಿರಾದಾರ, ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಎಸ್. ಹಿರೇಗೌಡರ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಸತೀಶ ತಿವಾರಿ, ಕಾರಗನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯದಾಧಿಕಾರಿ ಡಾ.ಸುನೀಲ ಹಿರೇಗೌಡರ, ಡಾ. ವಿಜಯಲಕ್ಷ್ಮಿ, ಡಾ. ಕವಿತಾ ದೊಡಮನಿ, ತಾಳಿಕೊಟಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ, ಕೊಡಗಾನೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಕೀರಣಗಿ, ಮಿಣಜಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ. ಎಮ್. ಸಾಗರ, ತಾಲೂಕು ಪಂಚಾಯತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ, ಆರೋಗ್ಯ ಇಲಾಖೆಯ ಹಾಗೂ ಗ್ರಾಮ ಪಂಚಾಯತಿಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.