ಇಂಡಿ : 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ನುಡಿದಂತೆ ನಡೆದು ತೋರಿಸಿದ ಮಹಾನ್ ಶರಣರಾಗಿ ಹೋಗಿದ್ದಾರೆ. ಅಂಥವರಲ್ಲಿ ಕಿನ್ನರಿ ಬ್ರಹ್ಮಯ್ಯ ಅವರೂ ಒಬ್ಬರಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ ಕಾಂತು ಇಂಡಿ ಹೇಳಿದರು. ಅವರು ಭತಗುಣಕಿ ಗ್ರಾಮದಲ್ಲಿ ನಡೆದ ಇಂಡಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ಹಾಗೂ ಶ್ರೀ ಬಸವೇಶ್ವರ ಪ್ರೌಢಶಾಲೆ ಭತಗುಣಕಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನರಿ ಬ್ರಹ್ಮಯ್ಯನವರ ಮೂಲತಃ ಆಂಧ್ರಪ್ರದೇಶದಲ್ಲಿ ಸುಮಾರು 856 ವರ್ಷಗಳ ಹಿಂದೆ ಜನ್ಮತಾಳಿ, ಅಕ್ಕಸಾಲಿಗ ವೃತ್ತಿಯನ್ನು ಮಾಡುತ್ತಿದ್ದನು. ಅಕ್ಕ ಸಾಲಿಗೆ ವೃತ್ತಿಯ ಜೊತೆ ಕಿನ್ನರಿ ನುಡಿಸುವುದನ್ನು ಒಬ್ಬ ಗುರುವಿನಿಂದ ಕಲಿತಿದ್ದನು. ತನ್ನ ಗುರುವಿಗೆ ಗುರು ದಕ್ಷಿಣೆಯಾಗಿ ಬಂಗಾರದ ಕಿರೀಟವನ್ನು ಧಾರಣೆ ಮಾಡಿದ. ಆ ಸಂದರ್ಭದಲ್ಲಿ ಗ್ರಾಹಕರೊಬ್ಬರಿಗೆ ಒಂದು ಗುಂಜಿ ಬಂಗಾರ ಕಡಿಮೆಯಾಗಿದ್ದರಿಂದ ಅಪವಾದ ಬಂದ ಕಾರಣ ಆ ವೃತ್ತಿಯನ್ನು ತ್ಯಜಿಸಿ, ಕಲ್ಯಾಣಕ್ಕೆ ವಲಸೆ ಬಂದು ಕಿನ್ನರಿ ಕಾಯಕವನ್ನೇ ಮುಂದುವರಿಸಿದ. ತನಗೆ ಬಂದ ಆದಾಯವನ್ನೆಲ್ಲಾ ತನ್ನ ಶಿವಭಕ್ತರಿಗೆ ಹಂಚುತ್ತಿದ್ದನು. ದಾನ ಮಾಡುವುದರಲ್ಲಿ ನಾನೇ ಶ್ರೇಷ್ಠ ಎಂಬ ಅಹಂಕಾರ ಬಂತು. ಮುಂದೆ ಕೇತಯ್ಯ ಎಂಬ ದಾನಶೂರನೊಬ್ಬ ಈತನಿಗಿಂತ ಭಕ್ತರಿಬ್ಬರಿಗೆ ಹೆಚ್ಚಿಗೆ ದಾನವನ್ನು ಮಾಡಿದನು. ಇದರಿಂದ ಆತನಿಗೆ ತನ್ನ ತಪ್ಪಿನ ಅರಿವಾಗಿ ತನಗಿಂತಲೂ ಹೆಚ್ಚಿಗೆ ದಾನ ಮಾಡಿದವನನ್ನೆ ತನ್ನ ಗುರುವಾಗಿ ಸ್ವೀಕರಿಸಿದನು. ಒಟ್ಟುಹದಿನಂಟು ವಚನಗಳನ್ನು ಬರೆದು, ಎರಡು ಪವಾಡಗಳನ್ನು ಮಾಡಿ ತೋರಿಸಿದನು.
ನಿರಾಡಂಬಳಾಗಿದ್ದ ಅಕ್ಕಮಹಾದೇವಿಯ ಶರೀರವನ್ನು ಸ್ಪರ್ಶಿಸಿ, ಆಕೆಯ ಶರೀರವನ್ನು ಮೋಹಿಸಬೇಕೆಂದು ಹೊಂಚು ಹಾಕಿದ್ದನು. ಆದರೆ,ಆತ ಸ್ಪರ್ಶಿಸಿದ ಶರೀರ ಸತ್ತ ಶವವಾಗಿತ್ತು. ಆಗ ಅಕ್ಕಮಾದೇವಿಯು ಪ್ರತ್ಯಕ್ಷಳಾಗಿ ಬಂದು, ಇವನನ್ನು ಅಣ್ಣ ಎಂದು ಸಂಬೋಧಿಸಿದಳು. ಇದರಿಂದ ಆಕೆಯ ಬಗ್ಗೆ ಪೂಜ್ಯ ಭಾವನೆ ಉಂಟಾಯಿತು. ಅದೇ ನೋವಿನಿಂದ ವಚನವನ್ನು ಬರೆದನು. ಮುಂದೆ ಬಿಜ್ಜಳನ ಮರಣದ ನಂತರ ಕಲ್ಯಾಣದಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದನು. ಹೀಗೆ ತನ್ನ ಜೀವನದಲ್ಲಿ ಬ್ರಹ್ಮಯ್ಯನು ನುಡಿದಂತೆ ನಡೆದು ತೋರಿಸಿ, ಮಹಾನ್ ಶರಣನಾಗಿ ಹೊರಹೊಮ್ಮಿದನು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಬಸವೇಶ್ವರ ಪ್ರೌಢಶಾಲೆಯ ಮುಖ್ಯಾಧ್ಯಾಪಕ್ ಆರ್ ಎಂ ಪಾಟೀಲ ಹಾಗೂ ಅಧ್ಯಕ್ಷತೆ ವಹಿಸಿದ್ದ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್ ವಿ ಗುಂದವಾನ ಮಾತನಾಡಿದರು.
ವೇದಿಕೆ ಮೇಲೆ ನಿವೃತ್ತ ಶಿಕ್ಷಕರಾದ ಎಸ್ ಬಿ ಗೌರಿ,ಶಿವಪುತ್ರ ಗಲಗಲಿ, ಹಾಗೂ ಶಿಕ್ಷಕಿಯರಾದ ಸುಮಂಗಲ ಗೋಷ್ಠಿ ಉಪಸ್ಥಿತರಿದ್ದರು. ಶ ಸಾ ಪ ಪ್ರಭಾರಿ ಅಧ್ಯಕ್ಷ ಆರ್ ವಿ ಪಾಟೀಲ ಸ್ವಾಗತ ಕೋರಿದರು.ಕದಳಿ ವೇದಿಕೆ ಅಧ್ಯಕ್ಷೆ ಶ್ರೀಮತಿ ಗಂಗಾ ಗಲಗಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್ ಆಯ್ ಸುಗೂರ ನಿರೂಪಿಸಿದರು.ಕುಮಾರಿ ರೂಪಾ ತಳವಾರ ಪ್ರಾರ್ಥಿಸಿದರು ಬಿ ಇ ಹಿರೇಮಠ ವಂದಿಸಿದರು.