ಇಂಡಿ : 12 ನೇ ಶತಮಾನ ಶರಣರ, ವಚನಕಾರರ ಕಾಲವಾಗಿತ್ತು.ಅದರಲ್ಲೂ ಅತೀ ಹೆಚ್ಚು ಶರಣರು ಉತ್ತರ ಕರ್ನಾಟಕದವರಾಗಿದ್ದವರು.ಬಹುತೇಕ ವಚನಕಾರರು ಹಾಡು ಭಾಷೆಯಲ್ಲಿ ಜನ ಸಾಮಾನ್ಯರಿಗೆ ತಿಳಿಯುವ ಹಾಗೆ ವಚನಗಳನ್ನು ಬರೆಯುತ್ತಿದ್ದರು.
ಅದರಲ್ಲಿ,ಅಲ್ಲಮಪ್ರಭು ಹಾಗೂ ಸಿದ್ದರಾಮೇಶ್ವರ ತ್ರಿಮೂರ್ತಿ ಪ್ರಮುಖ ಶರಣರಾಗಿದ್ದರು. ಈ ಮೂವರಲ್ಲಿ ಆದ್ಯ ವಚನಕಾರರಾಗಿ ಶರಣರಲ್ಲಿಯೇ ದೇವ ಎನಿಸಿಕೊಂಡ ಸಿದ್ದರಾಮರು ಶ್ರೇಷ್ಠ ವಚನಕಾರರಾಗಿದ್ದರು ಎಂದು ಸಂಶೋಧಕರಾದ ಮಲ್ಲಿಕಾರ್ಜುನ ಜೇವರ್ಗಿ ಅವರು ಹೇಳಿದರು.
ಇಂಡಿ ಪಟ್ಟಣದ ಶ್ರೀ ಬಸವರಾಜೇಂದ್ರ ಸತ್ಸಂಗ ಸಮಿತಿ ಹಾಗೂ ಶ್ರೀ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ “55ನೇ ಹುಣ್ಣಿಮೆ ಬೆಳಕು” ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು. ಬಸವಣ್ಣನವರು ಲೌಕಿಕ ಜೀವನದಲ್ಲಿದ್ದವರು. ಅಲ್ಲಮ ಪ್ರಭುಗಳು ಹೆಣ್ಣಿನ ಮೋಹಕ್ಕೆ ಒಳಗಾಗಿದ್ದರು.ಆದರೆ, ಸಿದ್ದರಾಮೇಶ್ವರರು ಕೇವಲ ಬ್ರಹ್ಮಚಾರಿಗಳಾಗಿ ಜನ ಸೇವಕರಾಗಿ ಕಾರ್ಯ ನಿರ್ವಹಿಸಿದವರಾಗಿದ್ದರು. ಸಾಕ್ಷಾತ್ ಮಲ್ಲಯ್ಯನ ದರ್ಶನ ಪಡೆದ ಪುಣ್ಯ ಪುರುಷರಾಗಿದ್ದರು. ಇವರ ನಿಜವಾದ ಇತಿಹಾಸ ತಿಳಿಯವದು ಕವಿ ರಾಘವಾಂಕ ಬರೆದ ಸಿದ್ದರಾಮೇಶ್ವರ ಚರಿತೆಯಲ್ಲಿ ಕಾಣಬಹುದಾಗಿದೆ.ಇನ್ನು
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಓಂಕಾರ ಆಶ್ರಮದ ಶ್ರೀ ಸಿದ್ಧಾರೂಢ ಮಠದ ಡಾ ಸ್ವರೂಪಾನಂದ ಸ್ವಾಮೀಜಿಯವರು ಮಾತನಾಡಿ, 12ನೇ ಶತಮಾನದಲ್ಲಿ ಹಲವಾರು ಶರಣರು ಆಗಿ ಹೋಗಿದ್ದಾರೆ. ಅವರಲ್ಲಿ ಸಿದ್ದರಾಮೇಶ್ವರರು ಬರೆದ ವಚನಗಳು ಸರ್ವಕಾಲಿಕ ವಾದವುಗಳು.ಇವರು ಸಾಕ್ಷಾತ್ ಪರಶಿವನ ಕೃಪೆಗೆ ಒಳಗಾಗಿದ್ದರು. ಇವರ ನಿಜವಾದ ಇತಿಹಾಸ ಬೆಳಕಿಗೆ ಬಾರದಿರುವುದು ಇವರ ಜಾತಿ ಮೂಲದ ಕುರಿತು ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಳಿ ವೇದಿಕೆಯ ಅಧ್ಯಕ್ಷರಾದ ಗಂಗಾಬಾಯಿ ಗಲಗಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಶೋಧಕರಾದ ಡಿ ಎನ್ ಅಕ್ಕಿ, ಸಮಿತಿ ಅಧ್ಯಕ್ಷರಾದ ಆಯ ಬಿ ಸುರಪುರ, ಕಜಾಪ ಅಧ್ಯಕ್ಷ ಆರ್ ವಿ ಪಾಟೀಲ,ಸಮಿತಿ ಉಪಾಧ್ಯಕ್ಷ ಬಿ ಎಸ್ ಪಾಟೀಲ, ಶ್ರೀಮತಿ ಎನ್ ಟಿ ಸಂಗಾ, ಪ್ರೊ ಎಸ್ ಬಿ ಬಸಗೊಂಡ,ಎಂ ಎಸ್ ಬಿರಾದಾರ, ಕೆ ಎಸ್ ಪಾಟೀಲ, ಎಚ್ ಎ ಪಾಟೀಲ, ಸಿ ಎಂ ಉಪ್ಪಿನ, ಎಚ್ ಎಸ್ ಏಳೆಗಾಂವ,ಕೆ ಜಿ ನಾಟಿಕಾರ, ಎನ್ ಎಲ್ ಹಚದಡ, ಸದಾನಂದ ಇರನಕೇರಿ ಉಪಸ್ಥಿತರಿದ್ದರು.