ನಂದಿ ಸೇನೆಯ ಹಕ್ಕೊತ್ತಾಯ ಪತ್ರ ಸರ್ಕಾರಕ್ಕೆ ಸಲ್ಲಿಕೆ
ಇಂಡಿ : ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರಾರಂಭವಾದ ನಂದಿ ಕೂಗು ಅಭಿಯಾನದ ಅಡಿಯಲ್ಲಿ ಕಳೆದ ಎರಡು ವರ್ಷಗಳಿಂದ ಜೋಡೆತ್ತಿನ ಕೃಷಿಕರ ಮಹತ್ವದ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ಸರ್ವಧರ್ಮಗಳ ರಕ್ಷಕರಾದ ಜೋಡೆತ್ತಿನ ಕೃಷಿಕರ ಸಂಖ್ಯೆ ಹೆಚ್ಚಾದರೆ ಮಾತ್ರ ರಾಷ್ಟ್ರಕ್ಕೆ ಒಳ್ಳೆಯ ಭವಿಷ್ಯವಿದೆ ಎಂಬುದು ಇತಿಹಾಸ, ವಚನ ಸಾಹಿತ್ಯ ಹಾಗೂ ಆಧುನಿಕ ವಿಜ್ಞಾನದಿಂದ ಸ್ಪಷ್ಟವಾಗಿ ತಿಳಿಯುತ್ತಿದೆ. ಆದಕಾರಣ, ರಾಷ್ಟ್ರ ಮಟ್ಟದ ನಂದಿ ಸೇನೆ ಸಂಘಟನೆಯನ್ನು ಸ್ಥಾಪಿಸಿ ರಾಷ್ಟ್ರದ ಪ್ರತಿ ಗ್ರಾಮದ ಜೋಡೆತ್ತಿನ ರೈತರನ್ನು ನಂದಿ ಸೇನೆ ಎಂಬ ಸಂಘಟನೆ ಅಡಿಯಲ್ಲಿ ಒಗ್ಗೂಡಿಸಿ ಅವರಿಗೆ ಪೂರಕ ಯೋಜನೆ ಹಾಗೂ ಕಾನೂನುಗಳನ್ನು ಜಾರಿಗೆ ತಂದು ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತನ್ನು ಹೆಚ್ಚಿಸಿ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಸ್ವಾವಲಂಬಿ ರಾಷ್ಟ್ರ ನಿರ್ಮಿಸುವ ಗುರಿ ಹೊಂದಲಾಗಿದೆ. ಬೀಜಗಳಿಂದ ಹೊಸ ಬೀಜ ಉತ್ಪಾದಿಸಲು ಸಾಧ್ಯವಿರುವಂತೆ, ಗ್ರಾಮಗಳಲ್ಲಿ ಉಳಿದಿರುವ ಜೋಡೆತ್ತಿನ ಕೃಷಿಕರು ಸಂಘಟಿತರಾಗಿ ತಮ್ಮ ಶ್ರಮಕ್ಕೆ ತಕ್ಕ ಬೆಲೆ ನೀಡುವ ಯೋಜನೆ ಹಾಗೂ ಕಾನೂನು ಜಾರಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಪಕ್ಷಾತಿತವಾಗಿ ಆಗ್ರಹಿಸಬೇಕಾದ ಅವಶ್ಯಕತೆ ಬಂದೊದಗಿದೆ. ಅದಕ್ಕಾಗಿ, ಜೋಡೆತ್ತಿನ ರೈತರ ಹಕ್ಕೊತ್ತಾಯ ಸಮಾವೇಶಗಳನ್ನು ಆಯೋಜಿಸುವ ಮೂಲಕ ಜೋಡೆತ್ತಿನ ರೈತರು ತಮ್ಮ ಹಕ್ಕನ್ನು ಪ್ರತಿಪಾದಿಸಲು ಸೂಕ್ತ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಮೊದಲ ಜೊಡೆತ್ತಿನ ರೈತರ ಹಕ್ಕೊತ್ತಾಯ ಸಮಾವೇಶವನ್ನು ವಿಜಯ ಏಕಾದಶಿಯ ದಿನವಾದ ದಿನಾಂಕ: 13-02-2026 ರಂದು ರಾಜ್ಯದ ಪ್ರಮುಖ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕೆಳಕಂಡಂತೆ ಐತಿಹಾಸಿಕವಾದ ಹಕ್ಕೊತ್ತಾಯ ಮಂಡನೆ ಮಾಡಲಾಯಿತು.
1. ಜೋಡೆತ್ತಿನ ರೈತರನ್ನು ವಿಶ್ವ ಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವದ ಮೂಲ ಬೇರುಗಳೆಂದು ಗುರುತಿಸಿ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು.
2. ಜೋಡೆತ್ತಿನ ರೈತರ ಬಸವ ತತ್ವ ಪುನರುತ್ಥಾನಕ್ಕಾಗಿ ರಾಜ್ಯದ 10 ಪ್ರತಿಶತ ಬಡ್ಜೆಟ್ ಮೀಸಲಿಡುವ ಕಾನೂನು ಜಾರಿಗೆ ತಂದು ನಂದಿ ಶಕ್ತಿಯಿಂದ ವಿದ್ಯುತ್, ಗ್ಯಾಸ್, ಸಾವಯವ ಉತ್ಪನ್ನಗಳು ಹಾಗೂ ಆರೋಗ್ಯವರ್ಧಕಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಯೊಜನೆಗಳನ್ನು ಜಾರಿಗೆ ತರಬೇಕು.
ಹಕ್ಕೊತ್ತಾಯ ಸಮಾವೇಶ ಜರುಗಿದ ಸಾಲೋಟಗಿ ಗ್ರಾಮದ ಶ್ರೀ ಸೋಮನಾಥ ಶಿವೂರ ಅವರ ನೇತೃತ್ವದಲ್ಲಿ ಹಕ್ಕೊತ್ತಾಯ ಪತ್ರವನ್ನು ಉಪವಿಭಾಗಾಧಿಕಾರಿಗಳಾದ ಶ್ರೀ ಚಿದಾನಂದ ಗುರುಸ್ವಾಮಿ ಅವರಿಗೆ ಇಂಡಿ ನಗರದಲ್ಲಿರುವ ಅವರ ಕಚೇರಿಯಲ್ಲಿ ಸಲ್ಲಿಸಲಾಯಿತು. ಹಕ್ಕೊತ್ತಾಯ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಾಲೋಟಗಿ ಗ್ರಾಮದ ರೈತರಾದ ಭೀಮರಾಯ ಕಣ್ಣಿ, ಪಾಂಡು ಹ್ಯಾಟಿ, ಮಲ್ಲು ಗುಡ್ಲ, ಸಂತೋಷ ಇಂಗಳೆ, ಸಂತೋಷ ಪರಸೆನವರ, ಶಿವಾನಂದ ಮನಗೊಂಡ, ಮಹೇಶ ಹಸನಾಪುರ, ಶ್ರೀಶೈಲ ನಾಗರಹಳ್ಳಿ, ಶಿವಾನಂದ ಹೊಸೂರ, ಗಂಗಾಧರ ಮನಗೊಂಡ, ಸಿದ್ದು ದೊಡ್ಡಿ, ಶಿವಪ್ಪ ಆಲಮೇಲ, ಮುದುಕ ಯಳಮೇಲಿ, ಶಿವರಾಜ ಪಾರಗೊಂಡ ಹಾಗೂ ಅನೇಕ ರೈತರು ಭಾಗವಹಿಸಿದ್ದರು.
ಜೋಡೆತ್ತಿನ ರೈತರ ಹಕ್ಕೊತ್ತಾಯ ಪತ್ರ ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:https://drive.google.com/drive/folders/1h2pEIV4UymrJZMpVW4Ohatv7zA3rcTNe
ನಂದಿ ಸೇನೆ ಸಂಘಟನೆ ಪ್ರಾರಂಭಿಸಿದ ಕುರಿತು ಮಾಹಿತಿ ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://share.google/fLcNNqCEN3Bgza1Ic
ನಂದಿ ಕೂಗು ಅಭಿಯಾನದ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಸಂಪರ್ಕಿಸಿ: missionsavesoil.com


















