ರಾಯಚೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾಭ್ಯಾಸಕ್ಕೆ ಕೊಟ್ಟಿರುವ ಪ್ರಾಮುಖ್ಯತೆ ಶ್ಲಾಘನೀಯವಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಹರೀಶ ರಾಮಸ್ವಾಮಿ ಕಾರ್ಯಗಾರದಲ್ಲಿ ಹೇಳಿದರು. ತಾಲ್ಲೂಕಿನ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಎಲ್ಲ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಎನ್‌ಇಪಿ ಸಂಯೋಜಕರು ಮತ್ತು ನೋಡಲ್ ಅಧಿಕಾರಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಎನ್‌ಇಪಿ ಕುರಿತಾಗಿ ಈಗಾಗಲೇ ರಾಯಚೂರು ವಿಶ್ವವಿದ್ಯಾಲಯದಲ್ಲಿ 13 ಕಾರ್ಯಕ್ರಮಗಳು ಆನ್‌ಲೈನ್, ಆಫ್‌ಲೈನ್ ಹಮ್ಮಿಕೊಂಡಿದ್ದೇವೆ. ಇನ್ನೂ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಉದ್ಯೋಗಾರ್ಹ ಕೌಶಲ್ಯ ಅಭಿವೃದ್ಧಿಯು ಇಂದಿನ ಪೀಳಿಗೆಗೆ ಅವಶ್ಯ ಎಂದರು. ಅಪೇಕ್ಷಿತ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗಾಧಾರಿತ ಶಿಕ್ಷಣ ನೀಡಲು ರಾಯಚೂರು ವಿಶ್ವವಿದ್ಯಾಲಯವು ಸದಾ ಸಿದ್ಧವಿದೆ. ವಿದ್ಯಾರ್ಥಿಗಳನ್ನು ಉದ್ಯೋಗ ಶೀಲರನ್ನಾಗಿಸುವ, ಮುಕ್ತವಾಗಿ ವಿಷಯಗಳನ್ನು ಆಯ್ಕೆಮಾಡಿ ಕಲಿತು ಪರಿಣಿತಿಯನ್ನು ಹೊಂದುವ, ಸಮಕಾಲಿನ ಬದುಕಿಗೆ ಅಗತ್ಯವಾದ ತಂತ್ರಜ್ಞಾನ, ಕಲಿಕೆಗೆ ಸಾಕಷ್ಟು ಅವಕಾಶಗಳು ಎನ್‌ಇಪಿಯಲ್ಲಿವೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಸದುಪಯೋಗ ಪಡೆದುಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಮುಖ್ಯವಾಗಿ ಮಾನವೀಯ ಮೌಲ್ಯಗಳು, ಶಿಸ್ತು, ಸಮಯಪ್ರಜ್ಞೆ, ಆಯೋಜನಾ ಪದ್ದತಿ ಹೊಂದಿದಾಗ ಶಿಕ್ಷಣದಲ್ಲಿ ಅಂದುಕೊಂಡ ಕಾರ್ಯ ಸಿದ್ದಿಯಾಗುವುದು ಎಂದು ಹೇಳಿದರು. ಕರ್ನಾಟಕ ಉಚ್ಛ ಶಿಕ್ಷಣ ಮಂಡಳಿ ವಿಶೇಷಾಧಿಕಾರಿ ಡಾ.ಎಂ.ಜಯಪ್ಪ ಮಾತನಾಡಿದರು. ರಾಯಚೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಯರಿಸ್ವಾಮಿ ಎಂ. ಮಾತನಾಡಿ, ಈ ಕಾರ್ಯಾಗಾರದ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವಶ್ಯವಾಗಿ ತಿಳಿದು ಅದರ ಸದುಪಯೋಗ ಪಡೆದುಕೊಂಡು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.