ಮುದ್ದೇಬಿಹಾಳ:ಪುರಸಭೆ ಸಭಾ ಭವನದಲ್ಲಿ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ೨೦೨೫-೨೬ನೇ ಸಾಲಿಗಾಗಿ ಪುರಸಭೆಗೆ ೧.೩೭ ಲಕ್ಷದ ಉಳಿತಾಯ ಬಜೆಟ್ ಮಂಡಿಸಿ ಸರ್ವ ಸದಸ್ಯರ ಅನುಮೋದನೆ ಪಡೆದುಕೊಳ್ಳಲಾಯಿತು.
ಸ್ವೀಕೃತಿಯಲ್ಲಿ(ಆದಾಯ) ರಾಜಸ್ವ (ರೆವೆನ್ಯೂ) ೧೧೬೭ ಲಕ್ಷ, ಬಂಡವಾಳ(ಕ್ಯಾಪಿಟಲ್) ೩೧೨ ಲಕ್ಷ, ಅಸಾಧಾರಣ (ಎಕ್ಸಟಾರ್ಡಿನಡಿ) ೨೦೯ ಲಕ್ಷ ಸೇರಿ ೧೬೮೮ ಲಕ್ಷ ಆದಾಯದ ಗುರಿ, ವೆಚ್ಚದಲ್ಲಿ ರಾಜಸ್ವ ೧೧೫೮.೨೫ ಲಕ್ಷ, ಬಂಡವಾಳ ೩೨೦ ಲಕ್ಷ, ಅಸಾಧಾರಣ ಪಾವತಿ ೨೦೯ ಲಕ್ಷ ಸೇರಿ ಒಟ್ಟು ೧೬೮೭ ಲಕ್ಷ ಗುರಿ ತೋರಿಸಲಾಗಿದೆ ಎಂದು ಅಧ್ಯಕ್ಷ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಸಭೆಗೆ ಮಾಹಿತಿ ನೀಡಿದರು.
ಬಿ-ಖಾತಾ ಅನುಷ್ಠಾನ
ಸರ್ಕಾರದ ಆದೇಶದಂತೆ ಬಿ-ಖಾತಾ ಅನುಷ್ಠಾನಕ್ಕೆ ಸಮರೋಪಾದಿಯ ಕ್ರಮಗಳನ್ನು ಕೈಕೊಳ್ಳಲಾಗಿದೆ. ಪುರಸಭೆಯಡಿ ಒಟ್ಟು ೧೪೬೮೨ ಆಸ್ತಿ ಇದ್ದು ಇದರಲ್ಲಿ ೩೭೮೭ ಆಸ್ತಿಗಳು ಅನಧಿಕೃತವಾಗಿದ್ದು ಬಿ ಖಾತಾ ವ್ಯಾಪ್ತಿಗೆ ಬರುತ್ತವೆ. ಡಬಲ್ ತೆರಿಗೆಯೊಂದಿಗೆ ಇವುಗಳನ್ನು ಬಿ ಖಾತಾದಡಿ ತಂದು ಗಣಕೀಕೃತ ಉತಾರೆ ಕೊಡಲಾಗುತ್ತದೆ ಎಂದು ಮುಖ್ಯಾಧಿಕಾರಿಯವರು ಸಭೆಗೆ ತಿಳಿಸಿದಾಗ ಅಧ್ಯಕ್ಷರು ಬಿ ಖಾತಾದಾರರಿಗೆ ಶೇ.೧೦ ಅಭಿವೃದ್ದಿ ಶುಲ್ಕ ವಿಧಿಸುವಂತೆ ಸಲಹೆ ನೀಡಿದರು. ಇದನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಅವರ ಆದೇಶದಂತೆ ನಡೆದುಕೊಳ್ಳಲಾಗುತ್ತದೆ. ಈ ಕುರಿತು ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗಿದ್ದು ಅಗತ್ಯ ದಾಖಲೆಗಳೊಂದಿಗೆ ಪುರಸಭೆ ಕಂದಾಯ ವಿಭಾಗ ಸಂಪರ್ಕಿಸಿ ಅರ್ಜಿ ಸಲ್ಲಿಸುವ ಮೂಲಕ ಗಣಕೀಕೃತ ನಮೂನೆ ೩ ಮತ್ತು ನಮೂನೆ ೩ಎ ಪಡೆದುಕೊಳ್ಳಲು ೩ ತಿಂಗಳ ಕಾಲಾವಕಾಶ ನೀಡಿದ್ದು ತಪ್ಪಿದಲ್ಲಿ ಅನಧಿಕೃತ ಆಸ್ತಿಗಳಿಗೆ ನಿಯಮ ೧೦ಎ ಅನ್ವಯ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ ಎಂದು ಮುಖ್ಯಾಧಿಕಾರಿಯವರು ತಿಳಿಸಿದರು.
೨೭ರಂದು ಭೂಮಿ ಪೂಜೆ
ಮುಖ್ಯ ಬಜಾರ್‌ನಲ್ಲಿ ನೆಲಸಮಗೊಳಿಸಲಾಗಿರುವ ಹಳೇ ಮಾರ್ಕೆಟ್ ಜಾಗದಲ್ಲಿ ಹೊಸ ಮೆಗಾ ಮಾರ್ಕೆಟ್ ಕಟ್ಟಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಇಬ್ಬರು ಟೆಂಡರ್ ಹಾಕಿದ್ದು ಎಸ್‌ಆರ್ ರೇಟ್ ಪ್ರಕಾರ ಟೆಂಡರ್ ಹಾಕಿದವರಿಗೆ ಅನುಮೋದನೆ ಕೊಡಲು ಸಭೆ ಒಪ್ಪಿಗೆ ನೀಡಿತು. ಫೆ.೨೭ರಂದು ಸಂಜೆ ೫ ಗಂಟೆಗೆ ಶಾಸಕ ಸಿ.ಎಸ್.ನಾಡಗೌಡರು ಮೆಗಾ ಮಾರ್ಕೆಟ್ ಕಟ್ಟಡದ ಭೂಮಿ ಪೂಜೆ ನೆರವೇರಿಸಲಿದ್ದು ಇದಕ್ಕಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರಿ ಪ್ರೊಟೊಕಾಲ್ ಪ್ರಕಾರ ಆಮಂತ್ರಣ ಪತ್ರಿಕೆ ಸಿದ್ದಗೊಂಡಿದ್ದು ವಿತರಣೆಗೆ ಚಾಲನೆ ನೀಡಲಾಗುತ್ತದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
₹8 ಕೋಟಿ ವಿಶೇಷ ಅನುದಾನ
ಶಾಸಕರ ವಿಶೇಷ ಪ್ರಯತ್ನದಿಂದಾಗಿ ಪುರಸಭೆಗೆ ೮ ಕೋಟಿ ಅನುದಾನ ದೊರಕಿದೆ. ಇದನ್ನು ಅಭಿವೃದ್ದಿಗೆ ಬಳಸಿಕೊಳ್ಳಲು ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಅನುಮೋದನೆ ಕೊಡಬೇಕು ಎಂದು ಪ್ರಸ್ತಾಪಿಸಿದಾಗ ಚರ್ಚೆ ನಡೆದು ಎಲ್ಲ ವಾರ್ಡಗಳಿಗೆ ತಲಾ ೫ ಲಕ್ಷ ಅನುದಾನ ನೀಡುವ, ನಾಮನಿರ್ದೇಶಿತ ಸದಸ್ಯರಿಗೂ ಅನುದಾನ ನೀಡುವ ಬೇಡಿಕೆ ಸದಸ್ಯರಿಂದ ಬಂತು. ಅಧ್ಯಕ್ಷರೊಂದಿಗೆ ಚರ್ಚಿಸಿ ಕ್ರಿಯಾಯೋಜನೆ ತಯಾರಿಸಲು ಅನುಮೋದನೆ ಪಡೆದುಕೊಳ್ಳಲು ತೀರ್ಮಾನಿಸಲಾಯಿತು.
ಆಲಮಟ್ಟಿ ರಸ್ತೆ ಆಸ್ತಿ ಕಾಪಾಡಿ
ನಾಮನಿರ್ದೇಶಿತ ಸದಸ್ಯ ಹರೀಶ ಬೇವೂರ ಅವರು ಬಿ ಖಾತಾ ಮೇಲೆ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಆಲಮಟ್ಟ ರಸ್ತೆ ಪಕ್ಕದ ವೀರಶೈವ ಲಿಂಗಾಯತ ರುದ್ರಭೂಮಿ ಪಕ್ಕದ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕಾಂಪ್ಲೆಕ್ಸ್ಗಳನ್ನು ನಿರ್ಮಿಸಲಾಗಿದೆ. ಅದು ಗಾರ್ಡನ್‌ಗೆ ಬಿಟ್ಟ ಜಾಗವಾಗಿತ್ತು. ಇಂಥ ನಿವೇಶನಗಳನ್ನು ಬಿ ಖಾತಾ ವ್ಯಾಪ್ತಿಗೆ ತರಬಾರದು. ಮೂಲ ದಾಖಲಾತಿ ಪರಿಶೀಲಿಸಿ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದಾಗ ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಲಾಯಿತು.
ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ, ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರು, ಪುರಸಭೆ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಪುರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಬಾಕಿ ೧.೯೯ ಕೋಟಿ ಇದ್ದು ಇಲ್ಲೀವರೆಗೆ ಶೇ.೧೦೬.೧೦ರಷ್ಟು ಗುರಿ ಸಾಧಿಸಲಾಗಿದೆ. ನೀರಿನ ತೆರಿಗೆ ಬಾಕಿ ೧.೧೫ ಕೋಟಿ ಇದ್ದು ಇಲ್ಲೀವರೆಗೆ ಶೇ.೩೧ರಷ್ಟು ಮಾತ್ರ ಗುರಿಸಾಧಿಸಿದ್ದು ಏಪ್ರೀಲ್ ಅಂತ್ಯದೊಳಗೆ ಉಳಿದ ಶೇ.೬೯ ಗುರಿ ಸಾಧಿಸಲು ಅಗತ್ಯ ಕ್ರಮ ಕೈಕೊಳ್ಳುತ್ತೇವೆ.
ಮಲ್ಲನಗೌಡ ಬಿರಾದಾರ,
ಮುಖ್ಯಾಧಿಕಾರಿ, ಪುರಸಭೆ, ಮುದ್ದೇಬಿಹಾಳ.
ಪೈಪಲೈನ್ ಕಾಮಗಾರಿ ಕಳಪೆ:ಜಲಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿರುವ ೩೦ ಕೋಟಿ ವೆಚ್ಚದ ೨೪*೭ ಕುಡಿವ ನೀರಿನ ಪೈಪಲೈನ್ ಅಳವಡಿಕೆ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ. ಸಿಸಿ ರಸ್ತೆಗಳನ್ನು ಹಾಳುಗೆಡವಿ ಪೈಪ್ ಹಾಕುತ್ತಿದ್ದಾರೆ. ವಾರ್ಡ ಸದಸ್ಯರು ಪ್ರಶ್ನಿಸಿದರೆ ಮುಖ್ಯಾಧಿಕಾರಿಯನ್ನು ಕೇಳುವಂತೆ ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಸದಸ್ಯೆ ಸಹನಾ ಬಡಿಗೇರ ದೂರಿದರು. ಮಧ್ಯಪ್ರವೇಶಿಸಿದ ಅಧ್ಯಕ್ಷರು ಕೆಲಸ ಮಾಡುವ ಗುತ್ತಿಗೆದಾರರು ಪುರಸಭೆ ಅನುಮತಿ ಪಡೆದುಕೊಂಡಿಲ್ಲ. ಹಿಂದೆ ನಡೆದ ಒಳಚರಂಡಿ ಯೋಜನೆಯಂತೆ ಇದು ಕೂಡಾ ಹಳ್ಳ ಹಿಡಿಯಬಾರದು. ಎಲ್ಲ ಸದಸ್ಯರು ತಮ್ಮ ವಾರ್ಡಗಳಲ್ಲಿ ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಬೇಕು ಎಂದಾಗ ಮುಖ್ಯಾಧಿಕಾರಿಯವರು ಕಾಮಗಾರಿ ಮಾಡುತ್ತಿರುವವರಿಗೆ ಪುರಸಭೆ ಅನುಮತಿ ನೀಡಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಪುರಸಭೆ ಸಿಬ್ಬಂದಿಯೊಬ್ಬರನ್ನು ನಿಯೋಜಿಸಿ ನಮ್ಮ ಆಸ್ತಿ ಹಾಳಾಗದಂತೆ ನೋಡಿಕೊಳ್ಳುವುದು ಸೂಕ್ತ ಎಂದರು. ಸದಸ್ಯೆ ಶಾಜಾದಬಿ ಹುಣಚಗಿ ಅವರು ಶಾಸಕರೇ ಈ ಕಾಮಗಾರಿಗೆ ಭೂಮಿ ಪೂಜೆ ನಡೆಸಿ ಚಾಲನೆ ನೀಡಿದ್ದಾರಲ್ಲ ಎಂದು ಪ್ರಸ್ತಾಪಿಸಿದಾಗ ಈ ಚರ್ಚೆಯನ್ನು ಅಲ್ಲಿಗೇ ಮೊಟಕುಗೊಳಿಸಲಾಯಿತು.