ರಾಯಚೂರು: ಮೊಬೈಲ್ ರೀಚಾರ್ಜ್ ಮತ್ತು ಡೇಟಾ ಪ್ಯಾಕ್ ದರಗಳ ಹೆಚ್ಚಳ ಕೈಬಿಡುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರವಾಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರಕೆ ಮನವಿ ಸಲ್ಲಿಸಿದರು.ಈ ಕೋವಿಡ್ -೧೯ ಪರಿಸ್ಥಿತಿಯಲ್ಲಿ, ಸಾಮಾನ್ಯ ಜನರ ಆರ್ಥಿಕ ಸ್ಥಿತಿಯು ತೀವ್ರ ಸಂಕಷ್ಟದಲ್ಲಿದೆ. ಈ ನಡುವೆ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಮೇಲಿನ ಅವಲಂಬನೆ ಅಸಾಧಾರಣವಾಗಿ ಹೆಚ್ಚಾಗಿದೆ. ವಿದ್ಯಾರ್ಥಿ ಯುವಕರು ಮತ್ತು ಸಾರ್ವಜನಿಕರು ತಮ್ಮ ಆನ್‌ಲೈನ್ ತರಗತಿಗಳು, ಆನ್‌ಲೈನ್ ಅಪ್ಲಿಕೇಶನ್‌ಗಳು, ಆನ್‌ಲೈನ್ ವಹಿವಾಟುಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಎಲ್ಲವುಗಳಿಂದ ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಪರಿಸ್ಥಿತಿಯಲ್ಲಿ, ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾದಂತಹ ಎಲ್ಲಾ ಮೊಬೈಲ್ ಕಂಪನಿಗಳು ನೆಟ್ ಪ್ಯಾಕ್ ಮತ್ತು ರೀಚಾರ್ಜ್ ದರಗಳನ್ನು ಶೇಕಡಾ ೨೦ ರಿಂದ ೨೫% ವರೆಗೆ ಹೆಚ್ಚಿಸಿವೆ. ಇದು ಸಂಪೂರ್ಣವಾಗಿ ಜನವಿರೋಧಿಯಾಗಿದೆ. ಸಂದರ್ಭದಲ್ಲಿ ಸೇವಾ ಪೂರೈಕೆದಾರರು ಮತ್ತು ಗ್ರಾಹಕರ ನಡುವೆ ತೀರ್ಪುಗಾರರ ಪಾತ್ರವನ್ನು ವಹಿಸಬೇಕಾದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಸಂಪೂರ್ಣವಾಗಿ ಮೌನವಾಗಿರುವುದನ್ನು ನೋಡಿ ನಮಗೆ ಆಘಾತವಾಗಿದೆ. ಸಾರ್ವಜನಿಕ ಉದ್ಯಮವಾಗಿದ್ದ ಬಿಎಸ್‌ಎನ್‌ಎಲ್ ದುರ್ಬಲಗೊಂಡ ನಂತರ, ಖಾಸಗಿ ಮೊಬೈಲ್ ಆಪರೇಟರ್ ಕಂಪನಿಗಳು ದೇಶದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಸೇವಾ ಮಾರುಕಟ್ಟೆಯ ಗಣನೀಯ ಭಾಗದ ಮೇಲೆ ತಮ್ಮ ಬಿಗಿಹಿಡಿತ ಸಾಧಿಸಿವೆ. ಆದ್ದರಿಂದ ಈ ಖಾಸಗಿ ಮೊಬೈಲ್ ಕಂಪನಿಗಳು ಭಾರೀ ಲಾಭ ಗಳಿಸಲು ತಮ್ಮ ಮೂಗಿನ ನೇರಕ್ಕೆ ದರಗಳನ್ನು ನಿಗದಿಮಾಡಿ, ಮೊಬೈಲ್ ಬಳಕೆದಾರರು ಅನಿವಾರ್ಯವಾಗಿ ಅಧಿಕ ಹಣ ಪಾವತಿಸುವಂತೆ ಮಾಡಿವೆ. ಖಾಸಗಿ ಮೊಬೈಲ್ ಕಂಪನಿಗಳ ಈ ಕ್ರಮವನ್ನು ನಮ್ಮ ಎಐಡಿವೈಒ ಸಂಘಟನೆ ವಿರೋಧಿಸುತ್ತದೆ ಮತ್ತು ಅಸಮಂಜಸವಾದ ಪ್ರಿಪೇಯ್ಡ್ ಸುಂಕದ ಹೆಚ್ಚಳವನ್ನು ತಕ್ಷಣವೇ ಹಿಂಪಡೆಯಿರಿ. ಬಿಎಸ್‌ಎನ್‌ಎಲ್ ಅನ್ನು ಮನಶ್ವೇತನಗೊಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಪ್ರತಿಭಟನೆ ನಡೆಸಿದರು.