ಸಕ್ಕರೆ ಸಚಿವ ಶಿವಾನಂದ ಪಾಟೀಲ್ ರಾಜಿನಾಮೆ ಆಗ್ರಹ..!
Voice Of Janata : ರೈತರು ಬರಗಾಲ ಬರುವುದನ್ನೇ ಕಾಯುತ್ತಿದ್ದಾರೆ ಎಂದು ರೈತರ ಬಗ್ಗೆ ಅವಹೇಳನಕಾರಿ – ಯಾಗಿ ಮಾತನಾಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಬಸವರಾಜಪ್ಪ ಬಣ) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ನಗರದ ಜಾಲಹಳ್ಳಿಹುಂಡಿ ಬಳಿ ಚಾಮರಾಜನಗರ-ಸಂತೇಮರಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ‘ರೈತರು ಬರಗಾಲ ಬರುವುದನ್ನೇ ಕಾಯುತ್ತಿರುತ್ತಾರೆ ಎಂದು ಸಚಿವ ಹೇಳಿರುವುದು ಖಂಡನೀಯ. ರೈತರು ಕಟ್ಟುವ ತೆರಿಗೆಯಿಂದ ಅವರು ಅನ್ನ ತಿನ್ನುತ್ತಿದ್ದಾರೆ. ಇದು ಸಚಿವರ ಗಮನದಲ್ಲಿರಬೇಕು. ರೈತರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು’ ಎಂದರು.
‘ರೈತರ ಸಾಲ ಮನ್ನಾ ಮಾಡುವ ಬದಲು ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲಿ. ಕಾಲುವೆಗಳಿಗೆ ನೀರು ಹರಿಸಿಲ್ಲ. ಮೊದಲು ಫಸಲುಗಳಿಗೆ ನೀರು ಬಿಡುವ ಕೆಲಸವನ್ನು ಸರ್ಕಾರ ಮಾಡಲಿ. ನೀರು ಕೊಟ್ಟರೆ ಸರ್ಕಾರ ನಮಗೆ ಪರಿಹಾರ ನೀಡುವುದೂ ಬೇಕಾಗಿಲ್ಲ’ ಎಂದು ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಸಚಿವರನ್ನು ಸಂಪುಟದಲ್ಲಿ ಉಳಿಸಿಕೊಂಡಿರುವುದು ಸರಿಯಲ್ಲ. ಅಪಮಾನಕರ ಹೇಳಿಕೆ ನೀಡಿ ನಾಲ್ಕು ದಿನಗಳಾದರೂ ಮುಖ್ಯಮಂತ್ರಿಯವರು ಶಿವಾನಂದ ಪಾಟೀಲ ಅವರನ್ನು ಕರೆದು ಬುದ್ದಿವಾದ ಹೇಳಿಲ್ಲ. ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಅನ್ನದಾತರನ್ನು ಕಡೆಗಣಿಸುತ್ತಿದೆ. ಹೀಗೆಯೇ ಮುಂದುವರಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೃಷಿಕರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು. ಸಿದ್ದರಾಮಯ್ಯ ಅವರು ಕೂಡಲೇ ಸಕ್ಕರೆ ಸಚಿವರಿಂದ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಜಿಲ್ಲೆಗೆ ಯಾರೇ ಸಚಿವರು ಬಂದರೂ ಅವರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು’ ಎಂದು ಬಸವಣ್ಣ ಎಚ್ಚರಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರ್ ಹೆಗ್ಗೋಠಾರ, ಗೌರಾವಾಧ್ಯಕ್ಷ ಹೊನ್ನೂರು ಮಹದೇವಸ್ವಾಮಿ, ಉಪಾಧ್ಯಕ್ಷ ಶಿವಮೂರ್ತಿ, ಮುಖಂಡರಾದ ಪುಟ್ಟಶೆಟ್ಟಿ, ಮೂರ್ತಿ, ಮಹದೇವಸ್ವಾಮಿ, ಹೊನ್ನೂರು ಸತೀಶ್, ಮಹೇಶ್ ಇತರರು ಇದ್ದರು.