ಸಚಿವ ಡಾ.ಎಂ.ಬಿ. ಪಾಟೀಲರು ಮೊದಲು ರಾಜ್ಯ ಸರ್ಕಾರದ ಕೆಲಸವನ್ನು ನೀಟಾಗಿ ಮಾಡಲಿ: ಸಂಸದ ರಮೇಶ
ವಿಜಯಪುರ :ಗೋಲಗುಂಬಜ್ ಎಕ್ಸಪ್ರೆಸ್ ರೈಲಿನ ಅವಧಿ ಕಡಿಮೆ ಮಾಡಲು ಹುಬ್ಬಳ್ಳಿ ಬೈಪಾಸ್ ಹಾಗೂ ಗದಗ ಬೈಪಾಸ್ ಮೂಲಕ ಸಂಚರಿಸುವಂತೆ ಮಾಡಲು ಕಳೆದ ಮೂರು ವರ್ಷಗಳ ಪ್ರಯತ್ನವಿದೆ, ನನ್ನ ಹಾವೇರಿ ಅಂದಿನ ಸಂಸದರಾಗಿದ್ದ ಶಿವಕುಮಾರ ಉದಾಸಿ ಅವರು ಸೇರಿದಂತೆ ಅನೇಕರ ಪ್ರಯತ್ನದಿಂದ ಈ ಕೆಲಸ ಸಾಧ್ಯವಾಗಿದೆ, ಸಚಿವ ಡಾ.ಎಂ.ಬಿ. ಪಾಟೀಲರು ಮೊದಲು ರಾಜ್ಯ ಸರ್ಕಾರದ ಕೆಲಸವನ್ನು ನೀಟಾಗಿ ಮಾಡಲಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಸಚಿವ ಡಾ.ಎಂ.ಬಿ. ಪಾಟೀಲರಿಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತ್ಯುತ್ತರ ನೀಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಈ ಪ್ರಯತ್ನ ಮಾಡುತ್ತಿರುವೆ, ಅನೇಕ ಸಂಸದ ಮಿತ್ರರು ಇದಕ್ಕೆ ಸಾಥ್ ನೀಡಿ ಈ ಬೇಡಿಕೆ ಮಂಡಿಸಿದ್ದರು, ಈ ಎಲ್ಲರ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ ಅವರು ಅವಧಿ ತಗ್ಗುವ ಈ ಕ್ರಮಕ್ಕೆ ಒಪ್ಪಿಗೆ ನೀಡಿದ್ದಾರೆ, ಅವರಿಗೆ ಸಾಕಷ್ಟು ಬಾರಿ ಮನವರಿಕೆ ಮಾಡಿ ಕೊಡುವ ಕೆಲಸ ಮಾಡಿದ ಪ್ರತಿಫಲವಾಗಿ ಈ ಕಾರ್ಯ ಅನುಷ್ಠಾನಗೊಂಡಿದೆ, ಇದು ಕೇಂದ್ರ ಸರ್ಕಾರದ ಕೆಲಸ, ಇದನ್ನು ನಾನು ಮಾಡಿರುವೆ ಎಂದು ಹೇಳಿಕೊಂಡರೆ ಹೇಗೆ? ನೀವು ನಿಮ್ಮ ರಾಜ್ಯ ಸರ್ಕಾರ ವ್ಯಾಪ್ತಿಯಲ್ಲಿ ಬರುವ ಕೆಲಸವನ್ನು ಮಾಡಿ ಎಂದು ಅವರು ಹೇಳಿದ್ದಾರೆ.
ವಂದೇ ಭಾರತ ರೈಲು ಬಿಡುಗಡೆ ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ, ಈ ಬಗ್ಗೆ ಜ್ಞಾನವಿದ್ದರೂ ಈ ಬಾಲಿಷತನದ ಸವಾಲು ಹಾಕಿರುವುದು ಸಚಿವ ಡಾ. ಎಂ.ಬಿ. ಪಾಟೀಲರಿಗೆ ಶೋಭೆ ತರುವಂತಹದ್ದಲ್ಲ. ಈ ರೈಲು ಗಂಟೆಗೆ ಪ್ರತಿ ಕಿ.ಮಿ. ೧೦೦ ವೇಗದಲ್ಲಿ ಓಡುತ್ತದೆ, ಅದಕ್ಕೆ ಪೂರಕವಾಗಿ ಇನ್ನೂ ಟ್ರ್ಯಾಕ್ ಸೆಟ್ಟಿಂಗ್ ಆಗಿಲ್ಲ, ಹೊಸ ಟ್ರ್ಯಾಕ್ ಇನ್ನೂ ಸೆಟಲ್ ಆಗಬೇಕು, ಅಲ್ಲಿಯವರೆಗೆ ಈ ರೈಲು ಸಂಚಾರ ಅಸಂಭವ, ಟ್ರ್ಯಾಕ್ ಸೆಟಲ್ ಆದ ನಂತರ ಖಂಡಿತವಾಗಿ ವಂದೇ ಭಾರತ ರೈಲು ಸಂಚಾರ ವಿಜಯಪುರಕ್ಕೂ ವಿಸ್ತರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ



















