ಭೀಕರ ಬರಕ್ಕೆ ಬರಡಾದ ಅನ್ನದಾತನ ಬದುಕು..!
ಬರಗಾಲಕ್ಕೆ ನೇಗಿಲಯೋಗಿ ವಿಲವಿಲ..!
ಹನಿ ಹನಿ ನೀರಿಗಾಗಿ ಸೂಕ್ಷ್ಮ ನೀರಾವರಿ ಯೋಜನೆ..!
ಸೂಕ್ಷ್ಮ ನೀರಾವರಿ ಯೋಜನೆ ಉಪಕರಣಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಅನ್ನದಾತ..!
ಗ್ಯಾರಂಟಿ ಯೋಜನೆ ಅನ್ನದಾತನಿಗೆ ಮುಳವಾಯಿತಾ..?
ಇಂಡಿ : ಹಳೆ ನೀರು ಹೋದ್ಮೇಲೆ ಹೊಸ ನೀರು ಬರಬೇಕು.. ಹಾಗೇ ಒಬ್ಬರು ಇನ್ನೊಬ್ಬರ ಮೇಲೆ ನಿರೀಕ್ಷೆ ಮತ್ತು ಪಲಾಪೇಕ್ಷೆದೊಂದಿಗೆ ಬದುಕು ಕಟ್ಟಿಕೊಳ್ಳವುದು ಸಹಜ. ಅದರಂತೆಯೇ ಭೂ ತಾಯಿಯ ಮೇಲೆ ಬದುಕು ಕಟ್ಟಿಕೊಳ್ಳುವ ಅನ್ನದಾತ, ಅನ್ನದಾತನ ಮೇಲೆ ಬದುಕು ಕಟ್ಟಿಕೊಳ್ಳುವ ಜನರು, ಜನರ ಮೇಲೆ ನಿರೀಕ್ಷೆಯಿಟ್ಟು ಬದುಕು ಕಟ್ಟಿಕೊಳ್ಳುವ ಸರಕಾರ. ಆದರೆ ಈ ಸರಕಾರದ ಸಹಾಯದ ನಿರೀಕ್ಷೆಯಲ್ಲಿರುವ ರೈತನಿಗೆ ಬರ ಸಿಡಿಲು ಬಡಿದಂತೆ ಆಗಿದೆ..
ಹೌದು ವಿಜಯಪುರ ಜಿಲ್ಲೆಯಲ್ಲಿ ಭವಿಷ್ಯದ ಜಿಲ್ಲಾ ಕೇಂದ್ರಕ್ಕಾಗಿ ತೀವ್ರವಾಗಿ ಪ್ರತಿಭಟಿಸುತ್ತಿರುವ ಭೀಮೆಯನಾಡು, ಲಿಂಬೆನಾಡು ಎಂದು ಪ್ರಖ್ಯಾತಿ ಹೊಂದಿರುವ ಇಂಡಿ ತಾಲ್ಲೂಕಿನ ಅನ್ನದಾತನ ಕಥೆ ವ್ಯಥೆ ಇದು.
ನಿರಂತರವಾಗಿ ಅತ್ಯಂತ ಬೀಕರ ಬರಗಾಲಕ್ಕೆ ಹಾಗೂ ಅತೀವೃಷ್ಠಿ, ಅನಾವೃಷ್ಠಿಗೆ ಅನ್ನದಾತನ ಬದುಕು
ಕಷ್ಟ ಸಂಪೂರ್ಣ ಸುಟ್ಟು ಹೋಗಿದೆ. ಆದರೆ ಈ ಭಾಗದಲ್ಲಿರುವ ರೈತರು ಸರಕಾರದ ಅತ್ಯಂತ ಜನಪ್ರಿಯ ಕೃಷಿಕರ ಯೋಜನೆಯಗಳಲ್ಲಿ ಒಂದಾಗಿರುವ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡು, ಅಲ್ಲಲ್ಲಿರುವ ಬಾವಿ, ಕೊಳವೆ ಬಾವಿ ,ಕೃಷಿ ಹೊಂಡ ಇತರೆ ಮೂಲದಿಂದ ಇರುವ ಅಲ್ಪ ಸ್ವಲ್ಪ ನೀರನ್ನು ಉಪಯೋಗಿಸಿ ತರಕಾರಿ ಜೊತೆಗೆ ಮತ್ತಿತರ ಕೃಷಿ, ತೋಟಗಾರಿಕೆ ಬೆಳೆ ಬೆಳೆಯುವ ನಿರೀಕ್ಷಯೆಲ್ಲಿರುವ ರೈತರಿಗೆ ಸರಕಾರದ ಸೂಕ್ಷ್ಮ ನೀರಾವರಿ ಉಪಕರಣಗಳು ಸಿಗದೆ ನಿರಾಸೆ ಮೂಡಿಸಿವೆ.
ಗುರಿ ಮತ್ತು ಬೇಡಿಕೆ : ಕೃಷಿ ಇಲಾಖೆಯ ದೂರದೃಷ್ಟಿಯ ವೈಫಲ್ಯ..!
ಅಖಂಡ ಇಂಡಿ ತಾಲ್ಲೂಕಿನಲ್ಲಿ ಸುಮಾರು120 ಗ್ರಾಮಗಳಿದ್ದು, 3 ಹೋಬಳಿ ಕೇಂದ್ರಗಳಿವೆ. ಅದರಲ್ಲಿ ಇಂಡಿ ಹೋಬಳಿ ಕೇಂದ್ರದಲ್ಲಿ ಸಾಮನ್ಯ ವರ್ಗದ ರೈತರಿಗೆ ಗುರಿ 455 ಸ್ಪಿಂಕ್ಲರ್ ವಿತರಿಸುವ ಗುರಿ ಇದ್ದರೆ, 2500 ಬೇಡಿಕೆ ಇದೆ. ಪರಿಶಿಷ್ಟ ವರ್ಗದಲ್ಲಿ ಗುರಿ 313 ಇದ್ದರೆ, ಬೇಡಿಕೆ 50 ಮಾತ್ರ ಇದೆ. ಇನ್ನೂ ಪರಿಶಿಷ್ಟ ಪಂಗಡದಲ್ಲಿ ಗುರಿ 11 ಇದ್ದರೆ, 115 ಬೇಡಿಕೆ ಇದೆ. ಇನ್ನೂ ಬಳ್ಳೊಳ್ಳಿ ಹೋಬಳಿ ಕೇಂದ್ರದಲ್ಲಿ ಸಾಮನ್ಯ ವರ್ಗದ ರೈತರಿಗೆ ಗುರಿ 455 ಇದ್ದರೆ, 3000 ಬೇಡಿಕೆ ಇದೆ. ಪರಿಶಿಷ್ಟ ವರ್ಗದಲ್ಲಿ ಗುರಿ 313 ಇದ್ದರೆ ಬೇಡಿಕೆ 100 ಇದೆ. ಪರಿಶಿಷ್ಟ ಪಂಗಡದಲ್ಲಿ ಗುರಿ 11 ಇದ್ದರೆ, ಬೇಡಿಕೆ 125 ಇದೆ. ಇನ್ನೂ ಚಡಚಣ ಹೋಬಳಿ ಕೇಂದ್ರದಲ್ಲಿ ಸಾಮನ್ಯ ವರ್ಗದ ರೈತರಿಗೆ ಗುರಿ 455 ಇದ್ದರೆ, ಬೇಡಿಕೆ 1800 ಇದೆ. ಪರಿಶಿಷ್ಟ ವರ್ಗದಲ್ಲಿ ಗುರಿ 313 ಇದ್ದರೆ, 75 ಬೇಡಿಕೆ ಇದೆ. ಇನ್ನೂ ಪರಿಶಿಷ್ಟ ಪಂಗಡದಲ್ಲಿ ಗುರಿ 11 ಇದ್ದರೆ, ಬೇಡಿಕೆ 150 ಇದೆ. ಒಟ್ಟಾರೆ ಗುರಿ ಮತ್ತು ಬೇಡಿಕೆ ಗಮನಿಸಿದರೆ ಸರ್ಕಾರದ ನಡೆ ಆನೆ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯಂತಾಗಿದ್ದು, ರೈತನಿಗೆ ಸಮಯಕ್ಕೆ ಸರಿಯಾಗಿ ಯೋಜನೆಗಳು ಸಿಗುವಲ್ಲಿ ಸಮಸ್ಯೆ ಯಾಗಿದ್ದರಿಂದ ನೇಗಿಲಯೋಗಿ ಬದುಕು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ.
ಇನ್ನಾದರೂ ಸರಕಾರ ಸರ್ವಜ್ಞರು ತಮ್ಮ ತ್ರಿಪದಿಯಲ್ಲಿ – “ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ರಾಟಿ ನಡೆಯುವುದು ಮೇಟಿಯಿಂದಲೆ ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಜಗವೆಲ್ಲ” ಎಂದು ತಿಳಿಸಿದಂತೆ ನಮ್ಮ ಬಹುಪಾಲು ಆಹಾರ ಬೇಡಿಕೆಯನ್ನು ಪೂರೈಸುವ ಕೃಷಿ, ನಮ್ಮ ನಾಡಿನ ಜನರ ಏಕೈಕ ವೃತ್ತಿಯಾಗಿದ್ದುದು ಇಂದಿಗೂ ಗ್ರಾಮೀಣ ಪ್ರದೇಶದ ಪ್ರತಿಶತ 68 ರಷ್ಟು ಜನರ ಕಸುಬಾಗಿಯೇ ಮುಂದುವರೆದಿರುವುದು, ಹಾಗೂ ಕೃಷಿ ಅವಲಂಬಿತ ಉದ್ದಿಮೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುತ್ತಿರುವುದು ಕೃಷಿ ಕ್ಷೇತ್ರದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಅದರಂತೆ ರೈತರ ಕಲ್ಯಾಣಕ್ಕಾಗಿ ಇರುವ ಕೃಷಿ ಇಲಾಖೆಯಲ್ಲಿ ರೈತರಿಗೆ ಸಿಗಬೇಕಾದ ಉಪಕರಣಗಳು ಸಕಾಲದಲ್ಲಿ ಅಗತ್ಯಕ್ಕೆ ಅನುಗುಣವಾಗಿ ವಿತರಿಸಲು ಆಗುತ್ತಿಲ್ಲ ಎಂದರೆ ಇಲಾಖೆ ಯಾರ ಕಲ್ಯಾಣ ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ರೈತರು ದೂರುತಿದ್ದಾರೆ. ಅನ್ನದಾತ ಬದುಕು ಆ ದೇವರಿಗೆ ಪ್ರೀತಿ..! ಎಂಬಂತಾಗಿದೆ.
ಅತ್ಯಂತ ಕೆಟ್ಟ ಬರಗಾಲದ ಪರಿಸ್ಥಿತಿ ನಮ್ಮ ತಾಲೂಕು ಎದುರಿಸುತ್ತಿದೆ. ನಮ್ಮ ತಾಲ್ಲೂಕಿನ ಸೂಕ್ಷ್ಮ ನೀರಾವರಿ ಯೋಜನೆ ಅತೀ ಉಪಯುಕ್ತ. ಆದರೆ ಸಕಾಲದಲ್ಲಿ ನಮ್ಮ ತಾಲ್ಲೂಕಿನ ರೈತರ ಜನಸಂಖ್ಯೆಗೆ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಬೇಡಿಕೆ ಅನುಗುಣವಾಗಿ ಕೂಡಲೇ ರೈತರ ಉಪಕರಣಗಳು ದೊರೆಯುತ್ತಿಲ್ಲ ಎಂಬುದು ಬೇಜಾರ ಸಂಗತಿ. ಕೂಡಲೇ ಸರಕಾರ ನಮ್ಮ ರೈತರಿಗೆ ಸೂಕ್ಷ್ಮ ನೀರಾವರಿ ಯೋಜನೆ ಉಪಕರಣಗಳು ಒದಗಿಸಲೆಂದು ಒತ್ತಾಯ ಮಾಡುತ್ತೆನೆ.
ಧರ್ಮರಾಜ ವಾಲಿಕಾರ ಅಧ್ಯಕ್ಷರು, ತಳವಾರ ಪರಿವಾರ ಸಮಾಜ ಸೇವಾ ಸಂಘ ಹಾಗೂ ಕಾಂಗ್ರೆಸ್ ಮುಖಂಡರು ಇಂಡಿ
ಈ ಹಿಂದಿನ ಬೇಡಿಕೆ ಅನುಗುಣವಾಗಿ ಉಪಕರಣಗಳು ಒದಗಿಸುವ ಪ್ರಯತ್ನ ಮಾಡಿದ್ದೆವೆ. ಇನ್ನೂ ಇತ್ತೀಚೆಗೆ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿದ್ದರಿಂದ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಬೇಡಿಕೆ ಅನುಗುಣವಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮಹಾದೇವಪ್ಪ ಎವೂರ
ಹಿರಿಯ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಇಂಡಿ