ದಲಿತಪರ ಸಂಘಟನೆಗಳ ಒಕ್ಕೂಟದಿಂದ ತಹಶೀಲ್ದಾರ್ ಬಲರಾಮ ಕಟ್ಟಿಮನಿಯವರಿಗೆ ಮನವಿ
ಕಾರ್ಮಿಕರ ನಕಲಿ ಕಾರ್ಡಗಳನ್ನು ಸೃಷ್ಟಿಸಿ, ವಂಚಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ
ಮುದ್ದೇಬಿಹಾಳ: ಪಟ್ಟಣದ ಹುಡ್ಕೋದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯ ಕಂಪ್ಯೂಟರ್ ಆಪರೇಟರ್‌ಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು ಅನರ್ಹರಿಗೆ ಕಾರ್ಮಿಕರ ನಕಲಿ ಕಾರ್ಡಗಳನ್ನು ಸೃಷ್ಟಿಸಿ ವಂಚಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ತರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ, ಪ್ರಗತಿಪರ, ರೈತ ಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಲರಾಮ ಕಟ್ಟಿಮನಿಯವರ ಮೂಲಕ ಕಾರ್ಮಿಕ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕಂಪ್ಯೂಟರ್ ಆಪರೇಟರುಗಳು ಕೂಲಿ ಕೆಲಸ ಮಾಡದೆ ಇರುವ ವ್ಯಕ್ತಿಗಳನ್ನೂ ಸಹಿತ ಕೂಲಿ ಕಾರ್ಮಿಕರೆಂದು ಅವರಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯ ಗುರ್ತಿನ ಚೀಟಿ ನೀಡಿದ್ದಾರೆ. ಇದಕ್ಕಾಗಿ ಅವರಿಂದ ಹಣ ಪಡೆದುಕೊಂಡಿದ್ದಾರೆ. ನಿಜವಾದ ಫಲಾನುಭವಿಗಳು ಬಂದರೆ ಇಲ್ಲಸಲ್ಲದ ನೆಪ ಹೇಳಿ ಅವರ ಅರ್ಜಿ ತಿರಸ್ಕರಿಸುತ್ತಾರೆ. ಸರ್ಕಾರದಿಂದ ಬರುವ ಕಾರ್ಮಿಕರ ಕಿಟ್‌ಗಳನ್ನು ತಮ್ಮ ಮನಸ್ಸಿಗೆ ಬಂದವರಿಗೆ ಕೊಡಿಸಿ ನಿಜವಾದ ಫಲಾನುಭವಿಗಳನ್ನು ವಂಚಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಗಿದೆ.
ಹೊಸದಾಗಿ ಬಂದಿರುವ ಕಾರ್ಮಿಕ ನಿರೀಕ್ಷಕರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು ಅವರಿಗೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ನಿಜವಾದ ಫಲಾನುಭವಿಗಳು ಸೌಲಭ್ಯ ದೊರಕದೆ ಪರದಾಡುತ್ತಿದ್ದಾರೆ. ಇದೇ ತಾಲೂಕಿನವರಾಗಿರುವ ಈ ಆಪರೇಟರ್‌ಗಳನ್ನು ಬೇರೆಡೆ ವರ್ಗಾಯಿಸಬೇಕು. ನಕಲಿ ಗುರ್ತಿನ ಚೀಟಿ ಪತ್ತೇ ಹಚ್ಚಲು ಬೇರೆ ತನಿಖಾಧಿಕಾರಿ ನೇಮಿಸಬೇಕು ಎಂದು ಆ.೧೯ರಂದೇ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬಸವರಾಜ ಪೂಜಾರಿ ಸಿದ್ದಾಪುರ ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದು ಸರೂರ, ಲವಕುಮಾರ ಜಲಪೂರ, ಮುದ್ದಪ್ಪ ಡೊಂಕಮಡು, ಮುತ್ತು ಅಮರಗೋಳ, ಲಕ್ಷ್ಮಣ ಗೋನಾಳ, ಅಬ್ದುಲಸಾಬ ಮುಲ್ಲಾ, ವೀರೇಶ ದೊಡಮನಿ, ರಜಿಯಾಬೇಗಂ ನದಾಫ, ಗಂಗು ಅಮರಗೋಳ, ಬಸಮ್ಮ ಮಾಗಿ, ಗೌರಮ್ಮ ದೊಡಮನಿ, ದುರ್ಗೇಶ ಮಿಣಜಗಿ, ಲಕ್ಷö್ಮಣ ಬಿದರಕುಂದಿ, ಪ್ರಕಾಶ ಹಾದಿಮನಿ, ಮಾಂತೇಶ ಕಂದಗನೂರ, ಮುತ್ತು ಕುರಿ ಸೇರಿ ಹಲವರು ಪಾಲ್ಗೊಂಡಿದ್ದರು. ಮಹಿಳಾ ರೈತ ಮೋರ್ಚಾ ಸದಸ್ಯರು ಬೆಂಬಲ ಸೂಚಿಸಿದ್ದರು.
ಪ್ರತಿಭಟನೆ, ಮನವಿ ಸಲ್ಲಿಕೆ ನಂತರ ಕಾರ್ಮಿಕ ಇಲಾಖೆ ಎದುರು ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಯಿತು. ಕಾರ್ಮಿಕ ಇಲಾಖೆ ಅಧಿಕಾರಿ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವ ಭರವಸೆ ನೀಡಿ ಧರಣಿ ಕೈಬಿಡುವಂತೆ ಮನವಿ ಮಾಡಿದರೂ ಸ್ಪಂಧನೆ ಸಿಗದೆ ನಿರ್ಗಮಿಸಿದರು. ಹೀಗಾಗಿ ಶುಕ್ರವಾರವೂ ಧರಣಿ ಮುಂದುವರೆಸಲು ಪ್ರತಿಭಟನಾನಿರತರು ತೀರ್ಮಾನಿಸಿದರು.