ಸೆ-4 ರಂದು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ : ಜಿಲ್ಲಾ ಅಧ್ಯಕ್ಷ ಎಸ್ ಬಿ ಕೆಂಬೋಗಿ
ಇಂಡಿ: ರಾಜ್ಯ ಸರಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಲಿಂಕ್ ಜೋಡಣೆ ಮಾಡುವ ಕ್ರಮ ಖಂಡಿಸಿ, ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಹಾಗೂ ಜಿಲ್ಲೆಯ ರೈತರು ಸೇರಿ ಸೆಪ್ಟೆಂಬರ್ ೪ ರಂದು ಮಧ್ಯಾಹ್ನ ೧೨ ಗಂಟೆಗೆ ವಿಜಯಪೂರ ನಗರದ ವಿದ್ಯುತ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಸ್.ಬಿ. ಕೆಂಬೋಗಿ ತಿಳಿಸಿದರು.
ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸರ್ಕಾರ ವಿದ್ಯುತ್ ನಿಗಮವನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದೆ. ರೈತರು ಇದರ ವಿರುದ್ದ ಪ್ರತಿಭಟಿಸಬೇಕೆಂದು ಕರೆ ನೀಡಿದರು. ಡಾ. ಸ್ವಾಮಿನಾಥನ ಸಮಿತಿಯು ಕಳೆದ ೨೩ ವರ್ಷಗಳ ಹಿಂದೆಯೇ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗಧಿಪಡಿಸಬೇಕೆಂದು ವರದಿ ನಿಡಿದ್ದರೂ ಕೂಡಾ ಅದು ಇಲ್ಲಿಯವರೆಗೆ ಸರ್ಕಾರ ಜಾರಿಗೆ ತಂದಿಲ್ಲ. ಇದೀಗ ಸರ್ಕಾರ ವಿದ್ಯುತ್ ಖಾಸಗೀಕರಣದ ಕಡೆಗೆ ಹೊರಟಿದೆ. ಇದರ ಬಗ್ಗೆ ರೈತರು ಎಚ್ಚತ್ತುಕೊಳ್ಳಬೇಕು ಎಂದು ಸೂಚನೆ ನೀಡಿದ ಅವರು ಸೆಪ್ಟೆಂಬರ್ ೪ ರಂದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ವಿಜಯಪೂರಕ್ಕೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಳ್ಳಬೇಕೆಂದು ಕರೆ ನೀಡಿದರು.
ನಗರ ಮತ್ತು ಹಳ್ಳಿ ಎಂದು ವಿದ್ಯುತ್ ನೀಡುವಲ್ಲಿ ತಾರತಮ್ಯ ಮಾಡಬಾರದು, ಗುಣಮಟ್ಟದ ವಿದ್ಯುತ್ ನೀಡಬೇಕು, ಫಸಲು ಹಾನಿ ಅಂದಾಜಿಸಿ ಪರಿಹಾರ ನೀಡಬೇಕು ಎನ್ನುವ ಹಲವಾರು ಬೇಡಿಕೆಗಳನ್ನು ಪೂರೈಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಗುವದು ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಹಣಮಂತ ಗುಡ್ಲ್, ಜೆಟ್ಟೆಪ್ಪ ಪೂಜಾರಿ, ಭೀರಪ್ಪ ಪೂಜಾರಿ, ರಫೀಕ ಚೌಧರಿ ಇದ್ದರು.
ಇಂಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಎಸ್.ಬಿ. ಕೆಂಬೋಗಿ ಮಾತನಾಡಿದರು.