ಸಹಸ್ರಾರು ಕೋಟಿಯ ದೊಡ್ಡ ದೊಡ್ಡ ಯೋಜನೆಗಳು ಬಗ್ಗೆ ಧ್ವನಿ ಮೊಳಗಿಸುವ ಜನಪ್ರತಿನಿಧಿಗಳು ಸ್ವತಂತ್ರ ಸೇನಾನಿಗಳ ಬಗ್ಗೆ ಬರಿ ಪೊಳ್ಳು ಭಾಷಣ ಮಾತ್ರ ಸಾದ್ಯ..!
ಇಂಡಿ : ಶಾಂತಿ, ಸತ್ಯ, ಅಹಿಂಸಾ ಮಾರ್ಗದ ಮೂಲಕ ಜಗತ್ತನ್ನು ಗೆಲ್ಲಬಹುದು ಎಂಬ ಸಂದೇಶ ಸಾರಿದ್ದು ರಾಷ್ಟ್ರ ಪಿತ ಮಹಾತ್ಮಗಾಂಧಿಜಿ ಎಂಬುದು ತಿಳಿದ ಸಂಗತಿ. ಜನರು ಪ್ರೀತಿಯಿಂದ ಬಾಪೂಜಿ ಎಂದು ಕರೆದರೆ ಇಡೀ ವಿಶ್ವಕ್ಕೆ ಮಹಾತ್ಮ ಗಾಂಧಿ ಎಂದು ಚಿರಪರಿಚಿತರು. ಮಹಾತ್ಮ ಗಾಂಧಿಯವರ 150ನೇ ಅವರ ಹುಟ್ಟು ಹಬ್ಬದ ನಿಮತ್ಯ ಗೌರವ ಸಲ್ಲಿಸಲು ಇಡೀ ಜಗತ್ತು ಒಂದಾಗಿದೆ ಎಂದು ಈ ಹಿಂದೆ ಒಮ್ಮೆ ಪ್ರಧಾನಿ ಮೋದಿ ಅವರು ಹೇಳಿರುವ ಮಾತು ನೆನಪಿಗೆ ಬರುತ್ತೆ.
ಹೌದು ಈ ಮಾತು ಸರ್ವಕಾಲಿಕ ಶ್ರೇಷ್ಠ ಸತ್ಯವಾಗಿರುವ ಮಾತು. ಮಹಾತ್ಮಗಾಂಧಿ ಯವರು ನಮ್ಮ ದೇಶಕ್ಕೆ ,ವಿಶ್ವಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುವದು ಪ್ರತಿಯೊಬ್ಬ ಪ್ರಜೆಗೂ ಗೊತ್ತು. ಅದರಂತೆ ಪ್ರತಿ ಚಿಕ್ಕ ಹಳ್ಳಿಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಇಂದು ರಾರಾಜಿಸುತ್ತೀವೆ.
ಕೆಲವು ಕಡೆ ಪ್ರತಿಮೆಗೆ ಅದ್ದೂರಿ ಅಲಂಕಾರಮಾಡಿ, ನೋಡುಗರ ಮನಸ್ಸುಆಕರ್ಷಣೆಗೊಳ್ಳುವಂತೆ ಶೃಂಗಾರಗೊಳಿಸಿ ಭಕ್ತಿಯಿಂದ ಪೂಜೆ ಸಲ್ಲಿಸುವುದು ನಾವು ನೀವು ಕಾಣುತ್ತೇವೆ. ಅಲ್ಲದೇ ಈಗಾಗಲೇ ದೇಶದ ಹಲವು ಕಡೆ ಅಮೃತಮಹೊತ್ಸವ ಹಿನ್ನೆಲೆ ಮತ್ತು ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಅದ್ದೂರಿ ಆಚರಣೆ ಮಾಡಲು ಪೂರ್ವ ಸಿದ್ದತೆ ನಡೆದಿದೆ.
ಆದರೆ ಭೀಮೆಯನಾಡು, ನಿಂಬೆನಾಡು ಎನಿಸುವ ಕೊಳ್ಳುವ ಈ ತಾಲೂಕಿನ ಮಾತ್ರ ಜನರು ಬೇಸರ ಮಾಡಿಕೊಳ್ಳುವಂತಾಗಿದೆ. ಹೌದು ಐತಿಹಾಸಿಕ ಗುಮ್ಮಟ ನಗರಿಯ ಜಿಲ್ಲೆಯ ಭವಿಷ್ಯದ ಜಿಲ್ಲಾ ಕೇಂದ್ರ ಎಂದು ಪ್ರತಿಬಿಂಬಿಸುತ್ತಿರುವ ಇಂಡಿ ತಾಲ್ಲೂಕಿನ ಮಹಾತ್ಮಗಾಂಧಿ ಚೌಕದಲ್ಲಿರುವ ಪ್ರತಿಮೆಯ ಕಥೆಯ ವ್ಯಥೆ ಇದು.
ಒಂದಾನೊಂದು ಕಾಲದಲ್ಲಿ ಅತ್ಯಂತ ಗತ ವೈಭವ ಮೆರೆದ ತಾಲ್ಲೂಕಿನ ಕೇಂದ್ರ ಬಿಂದು ಸ್ಥಾನವಾಗಿರುವ ಇಂಡಿ ಪಟ್ಟಣದ ಮಹಾತ್ಮಗಾಂಧಿ ಚೌಕ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತ್ತು ಇದಕ್ಕೆ ಇತಿಹಾಸವು ಸಾಕ್ಷಿ ಅದು ಹೇಗೆಂದರೆ ಈಗಿನ ಗಾಂಧಿ ಚೌಕದ ಹತ್ತಿರ ನಗರದ ಸುಪ್ರಸಿದ್ಧ ಆರಾಧ್ಯ ದೈವ ಶ್ರೀ ಶಾಂತೇಶ್ವರ ದೇವಸ್ಥಾನ, ಅಂಚೆ ಕಚೇರಿ,ಹಳೇ ಕಾಲದಲ್ಲಿ ನ್ಯಾಯಾಲಯ, ಬಂಗಾರ ಅಂಗಡಿಗಳು, ಮೊಟ್ಟ ಮೊದಲ ವಿಜಯಲಕ್ಷ್ಮಿ ಚಲನಚಿತ್ರ ಮಂದಿರ, ಸರಕಾರಿ ಪ್ರಾಥಮಿಕ ಶಾಲೆ, ಪ್ರಪಥಮದಲ್ಲಿ ಖಾಸಗಿ ಆಸ್ಪತ್ರೆಗಳು ಕೂಡಾ ಇಲ್ಲಿದ್ದವು ಅದರಲ್ಲೂ ವಿಶೇಷವಾಗಿ ಹಳ್ಳಿಗರು ತಮ್ಮ ನೂರಾರು ಎತ್ತಿನ ಗಾಡಿಯ ಮೂಲಕ ಆಗಮಿಸಿ ಗಾಂಧೀ ಚೌಕ ಬಜಾರದಲ್ಲಿ ಸಂತೆ ವ್ಯಾಪಾರ ವಹಿವಾಟು ಮುಗಿಸಿಕೊಂಡು ತಮ್ಮ ತಮ್ಮ ಊರಿಗೆ ಗೋಧೂಳಿ ಮುಹೂರ್ತದಲ್ಲಿ ಹೋಗುತ್ತಿದ್ದರು ನೋಡುಗರಿಗೆ ಅದೊಂದು ಅತ್ಯಕಾರ್ಷಕ ರೀತಿಯ ಕಣ್ಣಿಗೆ ಹಬ್ಬವಾಗಿತ್ತು.
ಆದರೆ ಇಂದು ಪಟ್ಟಣ ಬೆಳೆದಂತೆ ವ್ಯಾಪಾರ ವಹಿವಾಟದ ಎಲ್ಲಾ ಕೇಂದ್ರಗಳು ಬದಲಾಗಿವೆ. ಆದರೆ ಅಂದಿನ ಗತ ವೈಭವಕ್ಕೆ ಸಾಕ್ಷಿಯಾಗಿದ್ದ ಗಾಂಧಿ ಚೌಕ ಮತ್ತು ಬಜಾರ ಈಗ ಬೀಕೊ ಎನ್ನುತ್ತಿದೆ. ಇನ್ನೂ ಮಹಾತ್ಮ ಗಾಂಧಿಯವರ ಪ್ರತಿಮೆ ಹಾಗೂ ಚೌಕ ಪರಿಸ್ಥಿತಿ ಹೇಳತೀರದು ಮಹಾತ್ಮರ ಪ್ರತೀಮೆ ಧೂಳು ಮಣ್ಣಿನಿಂದ ಈಗ ಆವೃತವಾಗಿ ನಿಂತಿದೆ.
ಎಂದೋ ಹಾಕಿದ ವೃತ್ತದೊಳಗಿನ ಕಲ್ಲುಗಳು ಒಡೆದು ಹೋಗಿವೆ,ವೃತ್ತದೊಳಗೆ ಮಲೀನವಾಗಿ ಗಲೀಜು ನೀರು ನಿಂತಿದೆ ಚೌಕನ ಸುತ್ತಲೂ ಬಳಸಿ ಬಿಸಾಡಿದ ಪ್ಲಾಸ್ಟಿಕ್,ಕಾಗದದ ಹಾಳೆಗಳು ಕೆಟ್ಟ ಪದಾರ್ಥಗಳು, ಜಾನವಾರು ಮತ್ತು ಹಂದಿಗಳ ಮಲಮೂತ್ರದ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಅಯ್ಯೋ ಎನ್ನುವ ಪರಿಸ್ಥಿತಿ ಕಾಣಿಸುತ್ತದೆ.ಚೌಕು ಈಗ ನೆಲಮಟ್ಟಕ್ಕೆ ಸಮನಾಗಿದೆ.ವಿಪರ್ಯಾಸದ ಸಂಗತಿ ಎಂದರೇ ಯಾರು ಇದನ್ನು ಗಮನಿಸುತ್ತಿಲ್ಲ. ಇಲ್ಲಿನ ಚಿಂತಾಜನಕ ವ್ಯವಸ್ಥೆ ಕಂಡು ಯಾರೂ ಕೂಡಾ ಒಂದು ಕ್ಷಣ ನಿಂತಕೊಳ್ಳಲಾಗುವದಿಲ್ಲ.
ಆದರೆ ಇಂತಹ ಕೆಟ್ಟ ವಾತಾವರಣ ಮೂಡಲು ಕಾರಣ ಯಾರು..? ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿ ಕಾಡುತ್ತದೆ ಪ್ರಶ್ನೆ ಮಾಡದೇ ಇರುವ ಸಾಮಾನ್ಯ ಜನರೋ..! ಅಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯತೆಯೋ..! ಪೊಳ್ಳು ಭಾಷಣ ಮಾಡುವ ಜನ ಪ್ರತಿನಿಧಿಗಳು ಅಥವಾ ಸಹಸ್ರಾರು ಕೋಟಿಯ ದೊಡ್ಡ ದೊಡ್ಡ ಯೋಜನೆ ರೂಪಿಸುವ ಸರಕಾರವೋ..! ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಂದು ಗಾಂಧಿಜೀಯವರನ್ನು ನೆನೆಯುವ ದಿನ ಇಂದಿನ ದಿನ ಸಂಪೂರ್ಣ ದಿವ್ಯ ನಿರ್ಲಕ್ಷ್ಯತೆಗೊಳಗಾಗಿರುವ ಮಹಾತ್ಮನಿಗೆ ಮತ್ತು ಶಿಥೀಲವಾಗಿರುವ ಚೌಕಿಗೆ ಕಾಯಕಲ್ಪಿಸಿ ನೀರನ ಕಾರಂಜಿಯನ್ನು ಜೋಡಿಸಿ ಹಾಗೂ ನೆಲಮಟ್ಟಕ್ಕೆ ಬಂದಿರುವ ಚೌಕನ್ನು ಮೇಲ್ಮಟ್ಟಕ್ಕೆರಿಸಿ ಗೌರವಿಸುವ ಸ್ವಾತಂತ್ರ್ಯ ಪ್ರೇಮಿಗಳಾರು ಎಂಬುವದು ಎಲ್ಲರ ಮುಂದೆ ಯಕ್ಷಪ್ರಶ್ನೆಯಾಗಿದೆ. ಹಾಗಾಗಿ ಭವಿಷ್ಯದಲ್ಲಿ ಈ ಸಮಸ್ಯೆಗೆ ಉತ್ತರ ನೀಡಿ ಜನರ ಹೃದಯ ಗೆಲ್ಲುವರಾರು ಎಂಬುವದು ಸಾರ್ವಜನಿಕರ ಆಶಯವಾಗಿದೆ.