ಅಫಜಲಪುರದಲ್ಲಿ ಲೈವ್ ಮರ್ಡರ್|ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಮರ್ಡರ್
ಹಾಡಹಗಲೇ ಪತ್ನಿಯ ಕತ್ತು ಸೀಳಿ,ಮೈಮೇಲೆ ಕಾರು ಹತ್ತಿಸಿ ಕೊಂದ ಪತಿ!

ಅಫಜಲಪುರ:ತಾಲೂಕಿನ ಬಳ್ಳೂರ್ಗಿ ಗ್ರಾಮದ ಬಳಿ ಮನುಕುಲವೇ ತಲೆತಗ್ಗಿಸುವಂತಹ ಭೀಕರ ಕೊಲೆಯೊಂದು ನಡೆದಿದೆ.ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ನಡುರಸ್ತೆಯಲ್ಲಿ ಕುಡುಗೋಲಿನಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.ಮಹಾರಾಷ್ಟ್ರದ ಪುಣೆ ಮೂಲದ ಶೈಲಾ (28) ಎಂಬಾಕೆಯೇ ಕೊಲೆಯಾದ ದುರ್ದೈವಿ.ಈಕೆಯ ಪತಿ ಅಕ್ಷಯ್ ಎಂಬಾತನೇ ಈ ಕೃತ್ಯ ಎಸಗಿದ ಕಿರಾತಕ.ಅಕ್ಷಯ್ ತನ್ನ ಪತ್ನಿಯನ್ನು ಕಾರಿನಲ್ಲಿ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗೋಣ ಎಂದು ಕರೆದುಕೊಂಡು ಬಂದಿದ್ದಾನೆ.ಬಳ್ಳೂರ್ಗಿ ಗ್ರಾಮದ ಸಮೀಪದ ರಸ್ತೆಯ ಮಧ್ಯದಲ್ಲಿ ಆಕೆಯನ್ನು ಇಳಿಸಿ,ತನ್ನ ಬಳಿಯಿದ್ದ ಕುಡುಗೋಲಿನಿಂದ ಆಕೆಯ ಕತ್ತು ಸೀಳಿದ್ದಾನೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಶೈಲಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಕೊಂದ ಮೇಲೂ ಆರೋಪಿಯ ಕ್ರೌರ್ಯ:ಆರೋಪಿ ಅಕ್ಷಯ್ನ ಕ್ರೌರ್ಯ ಇಷ್ಟಕ್ಕೇ ನಿಂತಿಲ್ಲ,ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಬಳಿಕ,ಆಕೆಯ ಮೃತದೇಹದ ಮೇಲೆ ಕಾರನ್ನು ಹರಿಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ಭೀಕರ ದೃಶ್ಯವನ್ನು ಕಂಡ ಹಾದಿಹೋಕರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಟಮಟ ಮಧ್ಯಾಹ್ನ ಸಾರ್ವಜನಿಕವಾಗಿ ನಡೆದ ಈ ಕೃತ್ಯ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ.
ಪೊಲೀಸರಿಂದ ತೀವ್ರ ಶೋಧ
ಘಟನೆ ತಿಳಿಯುತ್ತಿದ್ದಂತೆಯೇ ಅಫಜಲಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ದಾಂಪತ್ಯ ಜೀವನದಲ್ಲಿ ಉಂಟಾಗಿದ್ದ ಜಗಳವೇ ಈ ಹತ್ಯೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಅಕ್ಷಯ್ನನ್ನು ಬಂಧಿಸಲು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.


















