2024-25 ನೇ ಸಾಲಿನ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ
ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರೆ ಬದುಕು ಅಭಿವೃದ್ಧಿ: ರಿಷಿ ಆನಂದ
ವಿಜಯಪುರ, ಮೇ.31 : ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರೆ ನಮ್ಮ ಬದುಕು ಅಭಿವೃದ್ಧಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹೇಳಿದರು.
ಜಿಲ್ಲಾ ಪಂಚಾಯತ ವಿಜಯಪುರ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ನಗರ ವಲಯ ವಿಜಯಪುರ ಹಾಗೂ ಕೆ. ಪಿ. ಎಸ್ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ) ಗಾಂಧಿ ವೃತ್ತ ವಿಜಯಪುರ ಇವರ ಸಹಯೋಗದಲ್ಲಿ ಗಾಂಧಿ ಚೌಕ್‌ನ ಕೆ. ಪಿ. ಎಸ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ)ನಲ್ಲಿ ಶುಕ್ರವಾರ ನಡೆದ 2024-25 ನೇ ಸಾಲಿನ ದಾಖಲಾತಿ ಆಂಧೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿಯೂ ಆಸಕ್ತಿ ವಹಿಸಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ಪುಸ್ತಕಗಳು, ಸಮವಸ್ತ್ರಗಳನ್ನು ವಿತರಿಸಲಾಗುತ್ತದೆ. ಅದನ್ನು ಉಪಯೋಗಿಸಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಮಾನಸಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಬಹಳ ಮುಖ್ಯವಾಗಿರುತ್ತದೆ. ಅದಕ್ಕೆ ಪೂರಕವಾದ ವಾತಾವರಣವನ್ನು ಶಾಲೆಗಳಲ್ಲಿ ಒದಗಿಸಲಾಗುತ್ತದೆ. ಜೊತೆಗೆ ಓದಿನೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಹ ತೊಡಗಿಸಿಕೊಳ್ಳಬೇಕು ಎಂದರು.
ಪ್ರಸ್ತುತ ಸಾಲಿನಲ್ಲಿ ನಮ್ಮ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಬಹಳ ಉತ್ತಮವಾಗಿತ್ತು. ಅದೇರೀತಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಫಲಿತಾಂಶಕ್ಕಾಗಿ ಶ್ರಮಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಲ್ಲದೆ ಮಕ್ಕಳಿಗೆ ದೈಹಿಕವಾಗಿ ಸದೃಢವಾಗಿರಲು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗಿಯಾಗಲು ಕರೆ ನೀಡಿದರು. ಉತ್ತಮ ಸಾಧನೆಗೆ ಶಿಕ್ಷಣ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆಯ ಮಾತುಗಳನ್ನಾಡುತ್ತಾ ಮಕ್ಕಳಿಗೆ ಸ್ಪರ್ಧಾತ್ಮಾಕ ಜಗತ್ತಿನ ಪ್ರೋತ್ಸಾಹ ನೀಡಿದರು.
ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮಾದೇವಿ ಸೊನ್ನದ ಅವರು ಕಳೆದ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಸಾಧನೆಯನ್ನು ನೆನಪಿಸುತ್ತ 2024-25 ನೇ ಸಾಲಿನ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಸೂಚ್ಯವಾಗಿ ವಿವರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಬಸವರಾಜ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ಹೊಂಗಯ್ಯರವರು ಮಕ್ಕಳ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಎಲ್ಲ ಶಿಕ್ಷಕರು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಬರುವಂತೆ ಶ್ರಮಿಸಲು ಕರೆ ನೀಡಿದರು.
ಉಪ ಪ್ರಾಂಶುಪಾಲರಾದ ಶ್ರೀ ಸಿ. ಎಸ್. ಕಾಂಬಳೆ ಸ್ವಾಗತಿಸಿದರು. ಎಮ್. ಎಫ್ ಅರಳಿಮಟ್ಟಿ ಇವರು ನಿರೂಪಿಸಿದರು ಹಾಗೂ ಹೆಚ್. ಡಿ ಮಸೂತಿರವರು ವಂದಿಸಿದರು.
ಈ ಸಂದರ್ಭದಲ್ಲಿ ಡೈಟ್‌ನ ಹಿರಿಯ ಉಪನ್ಯಾಸಕರು ಎಸ್ ಎ ಮುಜಾವರ, ಕೆ. ಪಿ. ಎಸ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಶಿಕ್ಷಕ ವೃಂದದವರಾದ ಎಸ್. ಜಿ. ಹಂಚಿನಾಳ, ಎನ್. ಎಂ. ಹುಂಡೇಕಾರ, ಆರ್. ಆರ್. ಬಿರಾದಾರ, ವ್ಹಿ. ಬಿ. ಇಂಡಿ, ಎಸ್. ಎಸ್. ಬಿರಾದಾರ, ಆರ್. ಎಸ್. ಹಕೀಮ್, ಎ. ಜೆ. ದಖನಿ, ಎಂ. ಎಫ್. ಅಂಗಡಿ, ಶೋಭಾದೇವಿ ರಾಜಾಪೂರ, ಶೈಲಾ ಶೀಲವಂತ, ಬಿ. ಎ. ಬಿರಾದಾರ, ಬಿ. ಬಿ. ಕೋರೆ, ಎನ್. ಎಂ. ಪಟೇಲ ಹಾಗೂ ಇತರರು ಉಪಸ್ಥಿತರಿದ್ದರು.