ಇಂಡಿ : ಹಸಿದವರಿಗೆ ಉಣಬಡಿಸುವ ಶರಣ ಸಂಪ್ರದಾಯದ ನಾಡು
ಇಂಡಿ : ದಾನ, ದಾಸೋಹ, ತತ್ವಾದರ್ಶ ಸಾರಿದ ಶರಣರ ನಾಡಾದ ವಿಜಯಪುರ ಜಿಲ್ಲೆ ಪ್ರಸಕ್ತ ಸಂದರ್ಭದಲ್ಲೂ ಕೊಡುಗೈ ದಾನಿಗಳ ಜಿಲ್ಲೆ ಎಂಬ ಕೀರ್ತಿ ಉಳಿಸಿಕೊಂಡಿದೆ. ಕೊಟ್ಟು ಮರೆಯುವ ಸ್ವಭಾವದ, ಹಸಿದವರಿಗೆ ಉಣಬಡಿಸುವ ಶರಣ ಸಂಪ್ರದಾಯದ ನಾಡು ಎಂಬ ಪುಣ್ಯದ ನೆಲವಿದು ಎಂದು ಮಲ್ಕಪ್ಪ ಶಿ ರೊಟ್ಟಿ ಹೇಳಿದರು.
ಸೋಮವಾರ ತಾಂಬಾ ಗ್ರಾಮದಲ್ಲಿ ಓಬಳಾಪೂರದಿಂದ ಪಂಢರಪೂರಕ್ಕೆ ಹೊರಟ ದಿಂಡಿ ಪಾದ ಯಾತ್ರಿಕರಿಗೆ ಬೀಳ್ಕೊಡುವ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು ‘ಗುರುವಿನ ಗುಲಾಮನಾಗುವತನಕ ಸಿಗದಣ್ಣ ಮುಕುತಿ’ ಎಂಬ ದಾಸರ ನುಡಿಯಂತೆ ನಾವು ಗುರುವಿಗೆ ಶರಣು ಹೋಗಬೇಕು. ವಿಶ್ವವನ್ನು ಸೃಷ್ಟಿಸಿದ ಸೃಷ್ಟಿಕರ್ತ ಮೊದಲು ಗುರವಾದರೆ, ಹೆತ್ತ ತಾಯಿ ಎರಡನೆಯ ಸ್ಥಾನದಲ್ಲಿ ನಿಲ್ಲುತ್ತಾಳೆ. ಶರಣರು, ತಪಸ್ವಿಗಳು, ಯತಿಗಳು, ಪೂಜ್ಯರು, ಫಕೀರರು ಮೂರನೆಯವರಾಗಿ ಗುರು ಸ್ಥಾನದಲ್ಲಿ ನಿಲ್ಲುತಾರೆ ಎಂದರು.
ಕಾರ್ತಿಕ ಮಾಸ ಬಂತೆಂದರೆ ಸಾಕು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಓಬಳಾಪುರಂದಿಂದ ಭಕ್ತರು ಪಂಡರಪೂರಕ್ಕೆ ಪಾದ ಯಾತ್ರೆಯ ಮೂಲಕ ಬರುತ್ತಾರೆ. ಓಬಳಾಪುರಂನ ಸುತ್ತಮುತ್ತಲಿನ ಭಕ್ತರು ತಾಳ, ಮೃದಂಗ, ವೀಣಾವಾದನಗಳೊಂದಿಗೆ ವಿಠ್ಠಲನ ಭಜನೆ ಮಾಡುತ್ತಾ ಗ್ರಾಮದಲ್ಲಿ ಭಕ್ತಿನಿನಾದವನ್ನು ಸುರಿಸುತ್ತ ಹಣೆಯ ಮೇಲೆ ಅಷ್ಟಗಂಧ, ಕೈಯಲ್ಲಿ ವಿಠ್ಠಲನ ಧ್ವಜ, ತಲೆಯ ಮೇಲೆ ತುಳಸಿ, ಬಾಯಲ್ಲಿ ವಿಠ್ಠಲ ವಿಠ್ಠಲ ಎಂದು ಹೇಳುತ್ತಾ ದಿಂಡಿ ಹೊತ್ತು ಗ್ರಾಮಕ್ಕೆ ನೂರಕ್ಕೂ ಹೆಚ್ಚು ಭಕ್ತರು ರವಿವಾರ ಸಾಯಂಕಾಲ ಆಗಮಿಸಿದ್ದರು. ರಾಮಚಂದ್ರ ದೊಡ್ಡಮನಿ, ವಿಠ್ಠಲ ಮುಂಜಿ ಯಾತ್ರಿಕರನ್ನು ಆದರದಿಂದ ಬರಮಾಡಿಕೊಂಡು ಸಕಲವ್ಯವಸ್ಥೆ ಮಾಡಿದರು.
ಸೋಮವಾರ ಬೆಳಿಗ್ಗೆ ಯಾತ್ರಿಕರಿಗೆ ಮಲ್ಕಪ್ಪ ಶಿ ರೊಟ್ಟಿ ಜೆ.ಆರ್.ಪೂಜಾರಿ, ನೆಹರು ಸಪಲಿ, ಇವರು ಬೆಳಿಗ್ಗೆ ಅನ್ನ, ಮಜ್ಜಿಗೆಸಾರು, ಬುಂದೆ, ಬಾಳೆಹಣ್ಣು ವ್ಯವಸ್ಥೆಯನ್ನು ಮಾಡಿಸಿ ನಂತರ ಬೀಳ್ಕೊಟ್ಟರು. ನಿತ್ಯ ೨೦ರಿರಿಂದ ೩೦ ಕಿ.ಮೀ. ಪಾದಯಾತ್ರೆ ಮಾಡುವ ಭಕ್ತರ ತಂಡಗಳು ರಾತ್ರಿ ವೇಳೆ ಯಾವುದಾದರೂ ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತಾರೆ. ಮರುದಿನ ಬೆಳಿಗ್ಗೆ ೫ರಿಂದ ಸ್ನಾನಾದಿಕರ್ಮ ಮುಗಿಸಿ ವಿಠ್ಠಲನ ನಾಮಸ್ಮರಣೆಯೊಂದಿಗೆ ಪೂಜೆ ಸಲ್ಲಿಸಿದ ಬಳಿಕ ಅನ್ನ ಪ್ರಸಾದ ಸ್ವೀಕರಿಸಿ ಪಾದಯಾರೆ ಮುಂದುವರಿಸುತ್ತಾರೆ.
ಬೀಳ್ಕೊಡುವ ಸಮಾರಂಭದಲ್ಲಿ ಮಲ್ಲು ಸಾಬಾ, ಉಮೇಶ ರೊಟ್ಟಿ, ಗಜಾನಂದ ಭರಮಣ, ಶ್ರೀಶೈಲ ಅವಟಿ, ಸಿದ್ದು ಹತ್ತಳ್ಳಿ, ಬಾಬು ರೋಡಗಿ, ಹಣಮಂತ ಪೂಜಾರಿ ಉಪಸ್ಥಿತರಿದ್ದರು.