VOJ ನ್ಯೂಸ್ ಡೆಸ್ಕ್: ಕಾಗದದ ಕೊರತೆಯಿಂದ ಶ್ರೀಲಂಕಾ ದಲ್ಲಿ ಶಾಲಾ ಮಕ್ಕಳ ವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. 1948 ರ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಅತಿ ದೊಡ್ಡ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡಿದ್ದು, ವಿದೇಶಿ ವಿನಿಮಯ ಪಾವತಿ ಕೊರತೆಯಿಂದ ಕಾಗದವನ್ನು ಆಮದು ಮಾಡಿಕೊಳ್ಳಲಾಗುತ್ತಿಲ್ಲ.
ಶ್ರೀಲಂಕಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸೋಮವಾರದಿಂದ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿತ್ತು. ಆದರೆ ಕಾಗದದ ಕೊರತೆಯಿಂದ ಅನಿರ್ದಿಷ್ಠಾವಧಿಗೆ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಹೇಳಿದೆ. ಇದರಿಂದಾಗಿ ಪರೀಕ್ಷೆ ಬರೆಯಬೇಕಿದ್ದ 4.5 ಲಕ್ಷ ಮಕ್ಕಳು ಪೇಚಿಗೆ ಸಿಲುಕಿದ್ದಾರೆ.
ಆರ್ಥಿಕ ಮುಗ್ಗಟ್ಟಿನಿಂದ ಶ್ರೀಲಂಕಾಕ್ಕೆ ಆಹಾರ, ತೈಲ, ಔಷಧ ಕೊರತೆಯೂ ಎದುರಾಗಿದೆ. ಶ್ರೀಲಂಕಾಕ್ಕೆ ವಾರ್ಷಿಕವಾಗಿ 6.9 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಬೇಕಾಗುತ್ತದೆ. ಈಗ ಸುಮಾರು ನಾಲ್ಕುಬಿಲಿಯನ್ ಡಾಲರ್ ವಿದೇಶಿ ವಿನಿಮಯ ಕೊರತೆ ಎದುರಿಸುತ್ತಿದೆ.