ಬಂಥನಾಳ ಶ್ರೀ ಶೈಕ್ಷಣಿಕ ಕ್ರಾಂತಿ ವಿಜಯಪುರಕ್ಕೆ ಮಾದರಿ
ಇಂಡಿ: ಉತ್ತರ ಕರ್ನಾಟಕದಲ್ಲಿ ನಿಜವಾಗಿಯೂ ಜ್ಞಾನವನ್ನು ಸಮಾಜಕ್ಕೆ ಕೊಟ್ಟವರು ಬಂಥನಾಳದ ಶ್ರೀ ಸಂಗನಬಸವ ಮಹಾ ಶಿವಯೋಗಿಗಳು. ಪೂಜ್ಯರ ಶೈಕ್ಷಣಿಕ ಕ್ರಾಂತಿ ವಿಜಯಪುರ ಜಿಲ್ಲೆಗೆ ಮಾದರಿ ಎಂದು ಮಹಾ ಸಂಸ್ಥಾನ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಶುಕ್ರವಾರ ಸಂಜೆ ನಡೆದ ಶ್ರೀ ಸಿದ್ದಲಿಂಗ ಮಹಾರಾಜರ 96ನೇ ಪುಣ್ಯಾರಾಧನೆ ಅಂಗವಾಗಿ ನಡೆದ ಶರಣರ ದರ್ಶನ ಕುರಿತ ಪ್ರವಚನದ ಮಹಾಮಂಗಲೋತ್ಸವದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬಂಥನಾಳದ ಶ್ರೀಗಳು ಯಾವ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದುಕೊಂಡಿರಲಿಲ್ಲ. ಅವರನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಬಂಥನಾಳ ಶ್ರೀಗಳನ್ನು ಗುರುತಿಸಿದವರು ಲಚ್ಯಾಣದ ಸಿದ್ದಲಿಂಗ ಮಹಾರಾಜರು. ಸಿದ್ಧಲಿಂಗ ಮಹಾರಾಜರು ಬಂಥನಾಳ ಶ್ರೀಗಳಿಗೆ ಸಂಪೂರ್ಣವಾಗಿ ಮಠವನ್ನು ಧಾರೆ ಎರೆದರು. ಸಿದ್ದಲಿಂಗ ಮಹಾರಾಜರ ಮೌನ ಕ್ರಾಂತಿಗೆ ಅಕ್ಷರ ಕ್ರಾಂತಿ ಜೋಡಿಸಿ ಸಾಮಾಜಿಕ ಸಾಮರಸ್ಯ ಮೂಡಿಸಿದವರು ಬಂಥನಾಳದ ಶ್ರೀ ಸಂಗನಬಸವ ಮಹಾ ಶಿವಯೋಗಿಗಳು ಎಂದು ಸ್ಮರಿಸಿದರು.
ಬಂಥನಾಳ ಮಠದ ಪ್ರಸ್ತುತ ಪೀಠಾಧೀಶರಾದ ಡಾ. ವೃಷಭ ಲಿಂಗೇಶ್ವರ ಮಹಾಶಿವಯೋಗಿಗಳು ಹುಬ್ಬಳ್ಳಿಯ 3 ಸಾವಿರ ಮಠದ ಶಿವಯೋಗಾಶ್ರಮದಲ್ಲಿ ನನ್ನ ಜೊತೆಗೆ ಬೆಳೆದವರು, ಚುರುಕು, ಸೂಕ್ಷ್ಮಮತಿ, ಶಿಸ್ತನ್ನು ರೂಡಿಸಿ – ಕೊಂಡವರು,ಸದಾ ಶಾಂತ ಸ್ವಭಾವದವರು, ಅಂತಹ ಪೂಜ್ಯರ ನೇತೃತ್ವದಲ್ಲಿ ಲಚ್ಯಾಣ ಮಠ ಸಮಾಜಮುಖಿ – ಯಾಗಿ ಪ್ರಗತಿ ಪತದತ್ತ ಸಾಗುತ್ತಿರುವುದು ಸಂತಸತಂದಿದೆ ಎಂದರು.
ಪ್ರವಚನಕಾರರಾದ ತುಂಗಳದ ಶ್ರೀ ಸಿದ್ದಲಿಂಗ ಶಾಂಭವಿ ಆಶ್ರಮದ ಅನುಸೂಯಾದೇವಿ ಅವರು ಮಾತನಾಡಿ, 12ನೇಯ ಶತಮಾನದಲ್ಲಿ ಅಣ್ಣ .ಬಸವಣ್ಣನವರು ಕಲ್ಯಾಣದ ಎಲ್ಲ ಶರಣರನ್ನು ಅಯ್ಯಾ ಎಂದು ಗೌರವಿಸುತ್ತಿದ್ದರು. ಆದ್ದರಿಂದ ಮಾತಿನಲ್ಲಿ ಅದ್ಭುತ ಶಕ್ತಿ ಅಡಗಿದೆ. ನಾವು ಕೂಡ ಬೇರೆಯವರ ಕುರಿತ ಗೌರವದಿಂದ ಮಾತನಾಡುವುದನ್ನು ರೂಡಿಸಿಕೊಳ್ಳಬೇಕು ಅಂದಾಗ ಸ್ವರ್ಗ ಸೃಷ್ಟಿಯಾಗುತ್ತದೆ ಎಂದರು.
ಸಾನಿಧ್ಯ ವಹಿಸಿದ ಆಲಮೇಲದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ತಾಯಿಯೇ ದೇವರು, ತಾಯಿಯನ್ನುಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಇತ್ತೀಚೆಗೆ ಸೇನೆಯಿಂದ ನಿವೃತ್ತರಾಗಿ ತವರು ಗ್ರಾಮಕ್ಕೆ ಆಗಮಿಸಿದ ಈರಣ್ಣ ಮುಜುಗೊಂಡ ದಂಪತಿಗಳನ್ನು ಎಲ್ಲಾ ಪೂಜ್ಯರು ಸನ್ಮಾನಿಸಿ ಗೌರವಿಸಿದರು.
ಬಂಥನಾಳದ ಶ್ರೀ ಡಾ. ವೃಷಭ ಲಿಂಗೇಶ್ವರ ಮಹಾ ಶಿವಯೋಗಿಗಳು, ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮಿಜಿ, ಗೋಳಸಾರದ ಶ್ರೀ ಅಭಿನವ ಪುಂಡಲಿಂಗ ಮಹಾ ಸ್ವಾಮೀಜಿ, ಅಗರಖೇಡದ ಅಭಿನವ ಪ್ರಭುಲಿಂಗೇಶ್ವರ ಮಹಾ ಸ್ವಾಮೀಜಿ, ಜಕನೂರಿನ ಶ್ರೀ ಸಿದ್ದಲಿಂಗ ದೇವರು, ಹೂವಿನ ಹಿಪ್ಪರಗಿಯ ಮಾತೋಶ್ರೀ ದ್ರಾಕ್ಷಾಯಣಿದೇವಿ, ತಡವಲಗಾದ ಅಭಿನವ ರಾಚೋಟ್ಟೆಶ್ವರ ಶಿವಾಚಾರ್ಯರು ಈ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಸಾಮೂಹಿಕ ಜನಪದ ನೃತ್ಯ, ಗಾಯಕ ಮುರಳಿಧರ ಭಜಂತ್ರಿ, ತಬಲಾವಾದ ಮಹಾದೇವ ಹೂಗಾರ ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ ಸ್ವಾಗತಿಸಿದರು. ಶಿಕ್ಷಕ ಎ. ಎಸ್ ಸರಸಂಬಿ ಹಾಗೂ ವಿಜಯಲಕ್ಷ್ಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.