ಪತ್ರಿಕೋದ್ಯಮ ಬದಲಾವಣೆಯ ಕಾಲಘಟ್ಟದಲ್ಲಿದೆ ; ಸಚಿವ ಎಮ್ ಬಿ ಪಿ
ಅಪರಾಧ ಸುದ್ದಿ ವೈಭವೀಕರಣ ಸಲ್ಲ : ಎಂಬಿಪಿ
ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ
ಸಾಧಕ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ
ವಿಜಯಪುರ : ಬ್ರೇಕಿಂಗ್ ನ್ಯೂಸ್ ಭರದಲ್ಲಿ ಕೊಲೆಗಳ ವೈಭವೀಕರಣ, ನಕಾರಾತ್ಮಕ ಸುದ್ದಿಗಳೇ ಹೆಚ್ಚಿನ ಪ್ರಮಾಣದಲ್ಲಿ ಬಿತ್ತರವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಅಪರಾಧ ಸುದ್ದಿಗಳ ವೈಭವೀಕರಣದಿಂದ ಸಮಾಜಕ್ಕೆ ಯಾವ ಉಪಯೋಗವೂ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಬಿ. ಪಾಟೀಲ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಇಲ್ಲಿನ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷವಾಗಿ ಟಿವಿ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್‌ಗೆ ಆಸ್ಪದ ನೀಡುತ್ತವೆ. ಜನಪರ ಯೋಜನೆ, ಸಮಸ್ಯೆಗಳ ಬಗ್ಗೆ ಸಭೆ ನಡೆಸಿದರೂ ಆ ಸಭೆಯ ಸಾರಾಂಶ ಟಿವಿಯಲ್ಲಿ ಬರದೇ ಇರುವುದು ನೋವಿನ ಸಂಗತಿ. ಬದಲಿಗೆ ಹೊರಗೆ ನೀಡುವ ರಾಜಕೀಯ ಹೇಳಿಕೆಗಳೇ ಪ್ರಧಾನವಾಗಿ ರಾರಾಜಿಸುತ್ತವೆ. ಅದರಲ್ಲೂ ನಕಾರಾತ್ಮಕ ಸುದ್ದಿಗಳೇ ಅಧಿಕ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮೊದಲಾದ ಅಪರಾಧ ಸುದ್ದಿಗಳ ವೈಭವೀಕರಣದಿಂದ ಯಾವ ಪ್ರಯೋಜನವೂ ಇಲ್ಲ. ಜನಪ್ರತಿನಿಧಿಗಳು ತಪ್ಪು ಮಾಡಿದಾಗ ತಿದ್ದಿ ಹೇಳುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದರು.
ಯೂಟ್ಯೂಬ್‌ಗಳು ಸಹ ಸಾಮಾಜಿಕ ಜವಾಬ್ದಾರಿ ಕಾಯ್ದುಕೊಳ್ಳಬೇಕು ಹೊರತು ವ್ಯಕ್ತಿಯೊಬ್ಬರ ತೇಜೋವಧೆ ಸಲ್ಲದು. ಬ್ಲಾಕ್‌ಮೇಲ್ ಸಂಸ್ಕೃತಿ ಸಲ್ಲದು ಎಂದರು.
ಮಾಧ್ಯಮ ರಂಗ ಪ್ರಜಾಪ್ರಭುತ್ವದ ನಾಲ್ಕನೇಯ ಆಧಾರ ಸ್ತಂಭ. ಹಿಂದಿನ ಕಾಲದಲ್ಲಿ ಪ್ರತಿ ಹಳ್ಳಿಯಲ್ಲಿ ಒಂದೇ ಪತ್ರಿಕೆ ಹೋಗುತ್ತಿತ್ತು. ಎಲ್ಲೆಡೆ ಆ ಪತ್ರಿಕೆಯೇ ಓದುಗರ ಮಾಹಿತಿ ಕಣಜವಾಗಿತ್ತು. ಆಗ ವಿಶ್ವಾಸಾರ್ಹತೆಯೂ ಪ್ರಧಾನವಾಗಿತ್ತು. ಕಾಲ ಕ್ರಮೇಣ ಟಿವಿ, ಯ್ಯೂಟ್ಯೂಬ್, ಸಾಮಾಜಿಕ ಜಾಲತಾಣ ಅಬ್ಬರದಲ್ಲಿ ಪತ್ರಿಕೋದ್ಯಮ ಬದಲಾವಣೆಯ ಕಾಲಘಟ್ಟದಲ್ಲಿದೆ. ಈಗ ಪತ್ರಿಕೆ ಮೊಬೈಲ್‌ನಲ್ಲಿ ಬಂದಿದೆ. ಈಗ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಸತ್ಯವನ್ನು ಬರೆಯುವಂತಾಗಬೇಕು. ಅಪರಾಧದ ಬದಲು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಭಿವೃದ್ಧಿ, ಶಿಕ್ಷಣಕ್ಕೆ ಒತ್ತು ನೀಡಿ ಜ್ವಲಂತ ಸಮಸ್ಯೆ, ಶೈಕ್ಷಣಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಕೆಲಸ ನಡೆಯಬೇಕಿದೆ ಎಂದರು.
ಪೊಲೀಸರು ದಿನದ ೨೪ ಗಂಟೆ ದುಡಿಯುತ್ತಾರೆ. ಹೀಗಾಗಿ ಅವರ ಹಿತರಕ್ಷಣೆಯ ಉದ್ದೇಶಕ್ಕಾಗಿ ಡಾ.ಔರಾದ್ಕರ ವರದಿಯನ್ನು ಅನುಷ್ಠ್ಠಾನಗೊಳಿಸುವ ಸಂಕಲ್ಪ ಮಾಡಿದ್ದೆ. ಪ್ರಸ್ತುತ ಸರಕಾರದಲ್ಲಿಯೂ ಸಹ ಈ ವರದಿ ಜಾರಿಗೆ ಸಂಪೂರ್ಣವಾಗಿ ಶ್ರಮಿಸುವೆ ಎಂದರು.
ಇದೇ ತೆರನಾಗಿ ಪತ್ರಕರ್ತರ ಜೀವನ ಸಹ ಸಂಕಷ್ಟದಲ್ಲಿದೆ ಎಂಬ ಬಗ್ಗೆ ನನಗೆ ಅರಿವಿದೆ ಎಂದ ಸಚಿವರು, ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಪತ್ರಕರ್ತರಿಗಾಗಿ ವಿಶೇಷ ವಿಮಾ ಯೋಜನೆ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಧೀಮಂತ ಪತ್ರಕರ್ತ ಮೊಹರೆ ಹನುಮಂತರಾಯರು ಪತ್ರಿಕಾ ರಂಗದಲ್ಲಿ ದೊಡ್ಡ ಕೊಡುಗೆ ನೀಡುವ ಮೂಲಕ ಪ್ರತಿಯೊಬ್ಬರು ಹೆಮ್ಮೆ ಪಡುವ ಸೇವೆಯನ್ನು ಈ ನಾಡಿಗೆ ನೀಡಿದ್ದಾರೆ. ಡಾ.ಫ.ಗು. ಹಳಕಟ್ಟಿ ಅವರನ್ನು ವಚನ ಗುಮ್ಮಟ, ವಚನ ಪಿತಾಮಹ ಎಂದು ಉಲ್ಲೇಖಿಸುತ್ತೇವೆ. ಆದರೆ ಅವರು ಪತ್ರಿಕಾ ರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವಲ್ಲಿ ಒಂದು ರೀತಿ ವಿಫಲವಾಗಿದ್ದೇವೆ. ಆರ್ಥಿಕ ಮುಗ್ಗಟ್ಟು ಅನುಭವಿಸಿದ ಸಂದರ್ಭದಲ್ಲಿಯೂ ನವ ಕರ್ನಾಟಕ ಪತ್ರಿಕೆಯನ್ನು ಶ್ರದ್ಧೆಯಿಂದ ಮುನ್ನಡೆಸಿದನ್ನು ಬಣ್ಣಿಸಿದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಸಾಕಷ್ಟಿದೆ. ಅವರು ಸಮಾಜದ ಅಂಕು-ಡೊಂಕು ತಿದ್ದುವ ಸಮಾಜ ಸುಧಾಕರಿದ್ದಂತೆ. ಹಾಗಾಗಿ ಪತ್ರಕರ್ತರು ಸತ್ಯವನ್ನೇ ಬರೆಯುವುದನ್ನು ಮೈಗೂಡಿಸಿಕೊಳ್ಳಬೇಕೆಂದರು. ರಾಜಕಾರಣಿಗಳಿಗೂ ಪತ್ರಕರ್ತರು ಬೇಕು. ಆದರೆ ಪತ್ರಕರ್ತರು ರಾಜಕಾರಣಿಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದೆಂದರು.
ಪಾಲಿಕೆ ಆಯುಕ್ತ ಬದ್ರೂದ್ದೀನ್ ಸೌದಾಗರ ಮಾತನಾಡಿ, ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಮಹಾನಗರ ಪಾಲಿಕೆಯಲ್ಲಿ ಠೇವಣಿ ಇಡುವ ಬೇಡಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹಾಸೀಂಪೀರ ದರ್ಗಾದ ಪೀಠಾಧೀಶ ಸಜ್ಜಾದೆ ನಶೀನ್ ಡಾ.ಸೈಯ್ಯದ್ ಮುರ್ತುಜಾ ಹುಸೇನಿ ಹಾಸ್ಮಿ ಆಶೀರ್ವಚನ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಕಲಿ ಪತ್ರಕರ್ತರ ಹಾವಳಿ ಅಧಿಕವಾಗಿದೆ. ಅನೇಕರು ಅನಧಿಕೃತವಾಗಿ ತಮ್ಮ ವಾಹನದ ಮೇಲೆ ಪ್ರೆಸ್ ಎಂದು ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ಎಲ್ಲವೂಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಾಹುಲ್ ಶಿಂಧೆ, ಎಸ್ಪಿ ಎಚ್.ಡಿ. ಆನಂದಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜು, ಕೆಯುಡಬ್ಲೂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಜ್ಯ ಸಮಿತಿ ಸದಸ್ಯ ಡಿ.ಬಿ. ವಡವಡಗಿ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಪ್ರಕಾಶ ಬೆಣ್ಣೂರ, ಫಿರೋಜ್ ರೋಜಿಂದಾರ, ಕಾರ್ಯದರ್ಶಿಗಳಾದ ಅವಿನಾಶ ಬಿದರಿ, ಶಕೀಲ್ ಬಾಗಮಾರೆ, ಮಲ್ಲು ಕೆಂಭಾವಿ, ಐಎಫ್‌ಡಬ್ಲೂö್ಯಜೆ ಸದಸ್ಯ ಮಹೇಶ ಶೆಟಗಾರ, ರಾಜ್ಯ ಸಮಿತಿ ನಾಮನಿರ್ದೇಶನ ಸದಸ್ಯರಾದ ಕೆ.ಕೆ. ಕುಲಕರ್ಣಿ, ಕೌಶಲ್ಯಾ ಪನಾಳಕರ ಮತ್ತಿತರರಿದ್ದರು. ಪ್ರೊ. ಎ. ಎಚ್. ಕೊಳಮಲಿ ನಿರೂಪಿಸಿದರು.
ವಾರ್ಷಿಕ ಪ್ರಶಸ್ತಿ ಪ್ರದಾನ: ಇದಕ್ಕೂ ಮುನ್ನ ಹಿರಿಯ ಪತ್ರಕರ್ತರಾದ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಬಸವರಾಜ ಸಂಪಳ್ಳಿ ಸೇರಿದಂತೆ ಸಾಧಕ ಪತ್ರಕರ್ತರು ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸಚಿವ ಎಂ.ಬಿ. ಪಾಟೀಲ ಗೌರವಿಸಿದರು.