ಲಿಂಗಸೂಗೂರು: ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ಅಧ್ಯಕ್ಷ ಎಸ್.ಎ.ನಯೀಮ್ ನೇತೃತ್ವದಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರವೇ ಅಧ್ಯಕ್ಷ ಎಸ್.ಎ.ನಯೀಮ್ ಮಾತನಾಡಿ ಮುದಗಲ್ ಪಟ್ಟಣದಲ್ಲಿ ಕುಡಿಯುವ ನೀರು ಎಂಟು, ಒಂಬತ್ತು ದಿನಗಳಿಗೊಮ್ಮೆ ಅನಿಯಮಿತವಾಗಿ ಸರಬರಾಜು ಆಗುತ್ತಿರುವ ಕಾರಣ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಡವರು ಎಂಟು, ಒಂಬತ್ತು ದಿವಸದ ವರೆಗೆ ನೀರು ಶೇಖರಣೆ ಮಾಡಲಾಗದೆ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಹಾಗೂ ಶೇಖರಣೆ ಮಾಡಿಟ್ಟ ನೀರಿನಲ್ಲಿ ಹುಳುಗಳು ಹುಟ್ಟಿ ಜನರು ಆ ನೀರನ್ನು ಬಳಸಲಾಗದೆ ಚೆಲ್ಲುವ ಪರಿಸ್ಥಿತಿ ಇದೆ. ಲಿಂಗಸುಗೂರನಲ್ಲಿ ನೀರಿನ ದರ ತಿಂಗಳಿಗೆ 80 ರೂಪಾಯಿ ಇದ್ದರೆ ಮುದಗಲ್ ನಲ್ಲಿ 140 ರೂಪಾಯಿ ಇದೆ ಇದನ್ನು ಕಡಿಮೆ ಮಾಡಬೇಕು. ನೀರಿನ ಸರಬರಾಜು ಎರಡು ದಿವಸಕ್ಕೊಮ್ಮೆಯಂತೆ ಮಾಡುವ ವ್ಯವಸ್ಥೆ ಮಾಡ ಬೇಕು. ಪಟ್ಟಣದಲ್ಲಿ ಹಾದು ಹೋಗಿರುವ ರಾಯಚೂರು ಬಾಗಲಕೋಟೆ ರಾಜ್ಯ ಹೆದ್ದಾರಿಯ ಡಿವೈಡರ್ ರಸ್ತೆ ಅಭಿವೃದ್ಧಿಗಾಗಿ ತಾವು ಅನುದಾನ ತಂದು ಅದ್ದೂರಿ ಭೂಮಿ ಪೂಜೆ ಮಾಡಿದ ನಂತರ ಕೆಲಸ ಪ್ರಾರಂಭವಾಗಿ ಆರು ತಿಂಗಳು ಗತಿಸಿದ್ದು ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ನಾಗರಿಕರು ದಿನ ನಿತ್ಯ ಧೂಳಿನಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಪುರಸಭೆಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಿದಂತೆ ಮಧ್ಯ ರಸ್ತೆಯಿಂದ ನಲತ್ತೆಂಟು ಅಡಿ ರಸ್ತೆ ಅಗಲಿಕರಣ ಮಾಡಬೇಕೆಂದು ಅಧಿಕಾರಿಗಳಿಗೆ ತಾವು ಆದೇಶ ಮಾಡಿದ್ದೀರಿ. ಆದರೆ ಅಧಿಕಾರಿಗಳು ತಮ್ಮ ಆದೇಶಕ್ಕೆ ಬೆಲೆ ಕೊಡದೆ ತಮ್ಮ ಮನಸ್ಸಿಗೆ ಬಂದಂತೆ ಅಂಗಡಿಕಾರರ ಆಮಿಷಕ್ಕೆ ಒಳಗಾಗಿ ಒಬ್ಬರಿಗೆ ಹೆಚ್ಚು ಒಬ್ಬರಿಗೆ ಕಡಿಮೆ ಮಾಡಿ ಮನಬಂದಂತೆ ತಾರತಮ್ಯ ಮಾಡಿದ್ದರಿಂದ ಜನ ಪರಸ್ಪರ ಜಗಳ, ವಾಗ್ವಾದ ಮಾಡುವಂತಾಗಿದೆ. ಇದರಿಂದ ರಸ್ತೆಯ ಕಾಮಗಾರಿ ವಿಳಂಬ ವಾಗುವುದರಲ್ಲಿ ಸ್ಥಳೀಯ ಅಧಿಕಾರಿಗಳೇ ಕಾರಣವಾಗಿದ್ದಾರೆ ಆದಕಾರಣ ರಸ್ತೆ ಅಗಲೀಕರಣಕ್ಕಾಗಿ ಸಹಾಯಕ ಆಯುಕ್ತರನ್ನು ಅಥವಾ ತಹಶಿಲ್ದಾರರನ್ನು ನೇಮಕ ಮಾಡಿ ತಾರತಮ್ಯ ಆಗದಂತೆ ಬೇಗ ಕಾಮಗಾರಿ ಮುಗಿಸಲು ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ವತಿಯಿಂದ ಒತ್ತಾಯ ಮಾಡಲಾಯಿತು. ಇದೇ ರೀತಿ ತಾರತಮ್ಯ ಮುಂದುವರೆದರೆ ಹಾಗು ಕೆಲವು ದಿನಗಳಲ್ಲಿ ಬೇಸಿಗೆ ಪ್ರಾರಂಭವಾಗುತ್ತಿದ್ದು ಎರಡು ದಿನಕ್ಕೊಂದು ಬಾರಿ ನೀರನ್ನು ಸರಬರಾಜು ಮಾಡದಿದ್ದರೆ ನಮ್ಮ ಸಂಘಟನೆ ವತಿಯಿಂದ ಪಟ್ಟಣದ ನಾಗರಿಕರ ಜೊತೆ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್. ಖಾದ್ರಿ, ಸಾಬು ಹುಸೇನ್, ಸಂತೋಷ ಕುಮಾರ ಗಬ್ಬೂರ,ಇಸ್ಮಾಯಿಲ್ ಬಳಿಗಾರ, ಮಹಾಂತೇಶ ಚೆಟ್ಟರ, ಇಸ್ಮಾಯಿಲ್ ಕೊಳ್ಳಿ, ಶಾನೂರ, ಪಾಶ ದುಮ ದುಮ್ ಉಪಸ್ಥಿತರಿದ್ದರು.