ರಾಯಚೂರು: ರೈತ ವಿರೋಧಿ ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (ಡಬ್ಲುಪಿಐ) ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ ರಾಜ್ಯದಲ್ಲಿ ಅಂಗೀಕಾರವಾದ ಕಾಯ್ದೆಗಳನ್ನು ಹಿಂಪಡೆದಿಲ್ಲ. ಭೂ ಸುಧಾರಣಾ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಗಳು ರೈತ ವಿರೋಧಿಯಾಗಿದ್ದು ಇಂತಹ ಕಾಯ್ದೆ ಜಾರಿಗೆ ತರುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಂಡವಾಳಶಾಹಿ ಪರ ಆಡಳಿತ ನಡೆಸುತ್ತಿದೆ. ದೇಶದ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಸರ್ಕಾರ ತರಾತುರಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ಪ್ರಜಾಪ್ರಭುತ್ವದ ವಿರೋಧಿ ನೀತಿ ಅನುಸಿಸುತ್ತಿದೆ. ಹೈನುಗಾರಿಕೆ ಜೀವಾಳವಾಗಿರುವ ರೈತ ಕುಟುಂಬಗಳ ಆರ್ಥಿಕತೆಗೆ ಸರ್ಕಾರದ ಕ್ರಮದಿಂದ ದೊಡ್ಡ ಹೊಡೆತ ಬಿದ್ದಿದೆ. ಜನರ ಆಹಾರದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ದೂರಿದರು.
ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸದೇ ಒಂದು ಸಮುದಾಯವನ್ನು ಗುರಿಯಾಗಿಸಿ ಗೋಹತ್ಯೆ ನಿಷೇಧ ಮಾಡಿದೆ. ಕೂಡಲೇ ಕಾಯ್ದೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.