ಅಫಜಲಪುರ : ಒಂದು ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಾದರೆ ಆದರ ಹಿಂದೆ ಕಠಿಣ ಪರಿಶ್ರಮ ಅಗತ್ಯ. ಪ್ರೋತ್ಸಾಹ ಕಠಿಣ ಶ್ರಮದಿಂದ ಯಶಸ್ಸು ಸಾಧ್ಯ. ಇದೇ ಮಾತುಗಳನ್ನು ತಮ್ಮ ಜೀವನದಲ್ಲಿ ನಿಜವಾಗಿಸಿದ್ದಾರೆ ಪಿಎಸ್ಐ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ 4 ನೇ ರ‌್ಯಾಂಕ್ ಪಡೆದ ಗ್ರಾಮೀಣ ಪ್ರದೇಶದ ತಾಲೂಕಿನ ಹೊಸೂರ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಪ್ರಮೀಳಾ ಭೀಮಾಶಂಕರ ಬರಗಾಲೆ.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ಕಾಲದಲ್ಲಿ ಸ್ವಗ್ರಾಮ ಹೊಸೂರ,ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ನಂತರ,ಮಣ್ಣೂರ ಹಾಗೂ ಕರಜಗಿ ಗ್ರಾಮದ ಸರ್ಕಾರಿ ಕಾಲೇಜಿನಲ್ಲಿಯೇ ಕಲಾ ವಿಭಾಗದಲ್ಲಿ ಪಿಯುಸಿ ಅಧ್ಯಯನ ಮಾಡಿ ನಂತರ ವಿಜಯಪುರದ ಬಿಡಿಇ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಂಡಿದ್ದರು.ಪಿಎಸ್‌ಐ ನೇಮಕಾತಿ ಪಟ್ಟಿಯಲ್ಲಿ ಮಹಿಳಾ ವಿಭಾಗದಲ್ಲಿ 4ನೇ ರ‌್ಯಾಂಕ್ ಗಳಿಸುವ ಮೂಲಕ ಪಿಎಸ್‌ಐ ಆಗುತ್ತಿರುವುದು ಗ್ರಾಮೀಣ ಭಾಗದ ಯುವ ಜನರಿಗೆ, ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.
ನನ್ನ ತಂದೆ ತಾಯಿ ಸಹೋದದರ ಅವರು, ನೀನು ಯಾವುದೇ ಸಣ್ಣ ಹುದ್ದೆಗೆ ಪ್ರಯತ್ನಿಸಬೇಡ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಾಸಾಗಿ ಉನ್ನತ ಹುದ್ದೆ ಸೇರಬೇಕು ಎಂದು ಹೇಳುತ್ತಿದ್ದರು. ನನ್ನ ಆಸೆ ಕೂಡಾ ಅದೇ ಇತ್ತು. ನನ್ನ ಪೋಷಕರ ಪ್ರೋತ್ಸಾಹದಿಂದ ನನ್ನ ಕನಸು ಈಡೇರಿದೆ ಎಂದು ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 4 ನೇ ರ‌್ಯಾಂಕ್ ಪಡೆದ ವಿದ್ಯಾರ್ಥಿನಿ ಪ್ರಮೀಳಾ ಭೀಮಾಶಂಕರ ಬರಗಾಲೆ ಹೇಳಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಹುದ್ದೆಯನ್ನು ಅಲಂಕರಿಸುವ ಮಹಾದಾಸೆಯೊಂದಿಗೆ ವಿಜಯಪುರಗೆ ತೆರಳಿ ಅಲ್ಲಿ ಅಧ್ಯಯನ ನಡೆಸಿ,ಪಿಎಸ್ ಐ ಪರೀಕ್ಷೆಯನ್ನು ಎದುರಿಸಿ ಸತತ ಪ್ರಯತ್ನದೊಂದಿಗೆ ಪೊಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆ ಆಯ್ಕೆಗಾಗಿ ಬರೆದ ಪರೀಕ್ಷೆಯಲ್ಲಿ ಮಹಿಳಾ ಕೋಟಾ ಅಡಿಯಲ್ಲಿ 4 ರ್‍ಯಾಂಕ್.ಪಡೆದಿದ್ದಾಳೆ.
ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದು ಕಡಿಮೆ, ಇಂತಹ ಸಂದರ್ಭದಲ್ಲಿಯೂ ನನ್ನ ತಂದೆ-ತಾಯಿ ಪ್ರೋತ್ಸಾಹ ಹಾಗೂ ಗುರುಗಳ ಮಾರ್ಗದರ್ಶದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಅವರೆಲ್ಲರೂ ನನ್ನಲ್ಲಿ ಆತ್ಮಸ್ಥೈರ್ಯವನ್ನು ತುಂಬಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ