ಲಿಂಗಸೂಗೂರು: ರಾಯಚೂರ ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಬಸವೇಶ್ವರ ಪದವಿಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವೇದಿಕೆಯಲ್ಲಿ “ಕಾನೂನು ಅರಿವು,ನೆರವು”ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನವದೆಹಲಿ ಮತ್ತು ಕರ್ನಾಟಕ ವಿಜ್ಞಾನ ಪರಿಷತ್ ಬೆಂಗಳೂರು ರವರ ಸಂಯುಕ್ತಾಶ್ರಯದಲ್ಲಿ “ವೈಜ್ಞಾನಿಕ ಮನೋಭಾವನೆ ಬೆಳೆಸಿ ಮೂಢ ನಂಬಿಕೆಯನ್ನು ಅಳಿಸಿ” ಎನ್ನುವ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್,ಬಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದರು. ಈ ವೇಳೆ ತಾಲೂಕಿನ ಕೆಸರಟ್ಟಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಜನಗೌಡ ಪಾಟೀಲ್ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬೈಕ್ ಓಡಿಸುವ ಮೂಲಕ ರೋಮಾಂಚನಕಾರಿ ದೃಶ್ಯವನ್ನು ಪ್ರದರ್ಶಿಸಿದರು.ಇವರು ನಿರಂತರ 20 ವರ್ಷಗಳಿಂದ ಸಮಾಜದಲ್ಲಿರುವ ಮೌಡ್ಯವನ್ನು ಹೋಗಲಾಡಿಸಲು ಸತತ ಪ್ರಯತ್ನ ಪಡುತ್ತಿದ್ದಾರೆ.ಯಾವುದೇ ಫಲಾಪೇಕ್ಷೆ ಇಲ್ಲದೇ ರಾಜ್ಯಾದ್ಯಂತ ಶಾಲಾ- ಕಾಲೇಜುಗಳಲ್ಲಿ,ಜಾತ್ರೆ,ಉತ್ಸವಗಳಲ್ಲಿ ವಿವಿಧ ಪವಾಡ ದೃಶ್ಯಗಳ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ.ಇಂತಹ ಸಮಾಜ ಸೇವೆ ಮಾಡುತ್ತಿರುವ ಶಿಕ್ಷಕರಿಗೆ ಎಸ್ ಪಿ ಯವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು,ಶಿಕ್ಷಣ ಇಲಾಖೆಯ ಸಿಬ್ಬಂದಿಗಳು,ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.