ಸಿಂಧನೂರು: ರಾಯಚೂರ ಜಿಲ್ಲೆಯ ಸಿಂಧನೂರು ನಗರದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ನಿವಾಸದಿಂದ ನಗರದ ಕನಕದಾಸ ವೃತ್ತ, ಸರ್ಕಾರಿ ಆಸ್ಪತ್ರೆ ಮುಂಬಾಗ, ವಾಲ್ಮೀಕಿ ವೃತ್ತದವರೆಗೆ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ “ಜೋಳ ಖರೀದಿಯಲ್ಲಿರುವ ಷರತ್ತುಗಳನ್ನು ಬದಲಿಸಿ ರೈತರನ್ನು ಉಳಿಸಿ” ಎಂಬ ಘೋಷ ವಾಕ್ಯದಡಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜೋಳ ಖರೀದಿ ಯಲ್ಲಿರುವ ಷರತ್ತುಗಳನ್ನು ಬದಲಾಯಿಸಿ ರೈತರನ್ನು ಉಳಿಸುವ ಕೆಲಸ ಸರ್ಕಾರ ಮಾಡಬೇಕು. ರೈತರ ಜೋಳ ಖರೀದಿಯಲ್ಲಿ ವಿಧಿಸಿರುವ ಷರತ್ತುಗಳನ್ನು ಬದಲಾಯಿಸಿ ರೈತರಿಗೆ ಅನುಕೂಲ ಮಾಡಬೇಕು. ಜಿಲ್ಲೆಗೆ ನಿಯಮದ ಪ್ರಕಾರ ಸರಬರಾಜು ಆಗಬೇಕಾದ ಡಿಎಪಿ ಮತ್ತು 10.26.26 ರಸಗೊಬ್ಬರ ಸರಬರಾಜು ಮಾಡಬೇಕು. ತಾಲೂಕಿನಲ್ಲಿ ಸರಿಸುಮಾರು ನಾಲ್ಕು ಹೋಬಳಿಗಳ ಭಾಗದಲ್ಲಿ 25000 ರಷ್ಟು ರೈತ ಕುಟುಂಬಗಳು ಸುಮಾರು 30.000 ಎಕರೆ ಪ್ರದೇಶದಲ್ಲಿ ಜೋಳ ಬೆಳೆದಿದ್ದು, ಕಳೆದ ವರ್ಷ ಬೆಳೆದ ಎಲ್ಲಾ ಜೋಳವನ್ನು ಸರ್ಕಾರವೇ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿತ್ತು. ಆದರೆ ಈ ಹಂಗಾಮಿನಲ್ಲಿ ಸರ್ಕಾರವು ಕೆಲವೊಂದು ಸುತ್ತೋಲೆಗಳು ಹೊರಡಿಸಿ ಹಲವಾರು ನಿರ್ಬಂಧಗಳು ವಿಧಿಸಿರುವುದರಿಂದ ಬೆಳೆದ ಜೋಳವನ್ನು ಹೇಗೆ ಮಾರಾಟ ಮಾಡಬೇಕು ಎಂಬುದು ರೈತರಿಗೆ ತಿಳಿಯದಂತಾಗಿದೆ. ಒಟ್ಟಾರೆಯಾಗಿ ರೈತರು ಬೆಳೆದ ಜೋಳಕ್ಕೆ ಯಾವುದೇ ಷರತ್ತುಗಳನ್ನು ಹಾಕದೇ ರೈತರ ಹಿತವನ್ನು ಸರ್ಕಾರ ಕಾಪಾಡಬೇಕು ಎಂದು ಒತ್ತಾಯಿಸಿದರು.


















