ಅಫಜಲಪುರ ಮತಕ್ಷೇತ್ರಕ್ಕೆ ಶಿವಕುಮಾರ ನಾಟಿಕಾರ ಅಭ್ಯರ್ಥಿ:
ಸರ್ಕಾರ ರಚನೆಗೆ ಮತ್ತೊಂದು ಪಕ್ಷದ ಮುಂದೆ ನಿಲ್ಲುವಂತೆ ಮಾಡಬೇಡಿ:
ಅಮೃತ ಮಹೋತ್ಸವ ಯೋಜನೆಗಳು ಮಧ್ಯವರ್ತಿಗಳ ಪಾಲು:
ಅಫಜಲಪುರ: ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಕೋಮು ದ್ವೇಷಗಳನ್ನು ಹುಟ್ಟಿಸಿ ಜನರನ್ನು ಬೀದಿಗೆ ಬಿಟ್ಟು ಅರಾಜಕತೆ ಸೃಷ್ಟಿಸಿಕೊಂಡು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇದನ್ನು ಕಂಡು ಜನ ಬೇಸತ್ತಿದ್ದಾರೆ. ಹೀಗಾಗಿ ೨೦೨೩ಕ್ಕೆ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಹುಮತದೊಂದಿಗೆ ರಚನೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ ಹಾಲನಲ್ಲಿ ನಡೆದ ಜೆಡಿಎಸ್ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷದಿಂದ ಲಾಭ ಪಡೆದು ಹೋದವರ ಬಗ್ಗೆ ನಾವು ಚಿಂತಿಸುವುದಿಲ್ಲ. ನಮ್ಮ ಪಕ್ಷಕ್ಕೆ ಹಣವಂತರು, ದೊಡ್ಡ ವ್ಯಕ್ತಿಗಳ ಅವಶ್ಯಕತೆ ಇಲ್ಲ, ನಿಷ್ಠಾವಂತ ಯುವಕರು ಬೇಕಾಗಿದೆ. ಹೀಗಾಗಿ ಈ ಬಾರಿ ಯುವಕರ ಪಡೆ ಕಟ್ಟಿಕೊಂಡು ವಿಧಾನಸಭೆ ನಡೆಸುತ್ತೇನೆ. ಬೇರೆ ಪಕ್ಷಗಳು ಮಾಡಿರುವ ಅನಾಚಾರಗಳ ಬಗ್ಗೆ ರಾಜ್ಯದ ಜನರಿಗೆ ತಿಳಿದಿದೆ ಹೀಗಾಗಿ ಅದನ್ನು ಟೀಕಿಸುವ ಬದಲಾಗಿ ನಾವು ಅಧಿಕಾರದಲ್ಲಿದ್ದಾಗ ಮಾಡಿದ ಜನಪರ ಕೆಲಸಗಳನ್ನು ಜನರ ಮನೆ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ನಿಮ್ಮ ಧ್ವನಿಯಾಗಿರುವ ಯುವ ನಾಯಕರನ್ನು ವಿಧಾನಸಭೆಗೆ ಕಳುಹಿಸುವ ಕೆಲಸ ನೀವು ಮಾಡಬೇಕಾಗಿದೆ, ಅಫಜಲಪುರ ಮತಕ್ಷೇತ್ರದಿಂದ ಶಿವಕುಮಾರ ನಾಟಿಕಾರ ಅವರನ್ನು ಅಭ್ಯರ್ಥಿ ಎಂದು ವೇದಿಕೆ ಮುಖಾಂತರ ಘೋಷಣೆ ಮಾಡುತ್ತಿದ್ದೇನೆ ಎಂದರು.
ನಮ್ಮ ಪಕ್ಷ ಒಮ್ಮೆಯೂ ಪೂರ್ಣಾವಧಿ ಸರ್ಕಾರ ನಡೆಸಿಲ್ಲ, ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ನಾನು ನನ್ನ ಇತಿಮಿತಿಯಲ್ಲಿಯೂ ಸಹ ರೈತರು ಸಾಲ ಮನ್ನಾ ಮಾಡಿ ಕಣ್ಣಿರು ಒರೆಸುವ ಕೆಲಸ ಮಾಡಿದ್ದೇನೆ. ಒಂದು ಬಾರಿ ನನಗೆ ಪೂರ್ಣಾವಧಿ ಸರ್ಕಾರ ರಚನೆ ಮಾಡುವ ಅವಕಾಶ ನೀಡಿ, ಸರ್ಕಾರ ರಚನೆಗೆ ಮತ್ತೊಂದು ಪಕ್ಷದ ಮುಂದೆ ನಿಲ್ಲುವಂತೆ ಮಾಡಬೇಡಿ ಎಂದು ಮನವಿ ಮಾಡಿದರು. ಕೇಂದ್ರ, ರಾಜ್ಯ ಸರ್ಕಾರಗಳು ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿವೆ. ರಾಜ್ಯ ಸರ್ಕಾರ ಅಮೃತ ಮಹೋತ್ಸವ ಹೆಸರಿನ ಯೋಜನೆಗಳನ್ನು ತಂದು ಮಧ್ಯವರ್ತಿಗಳ ಪಾಲು ಮಾಡಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳು ಮಧ್ಯವರ್ತಿಗಳಿಗಾಗಿ ಅಲ್ಲ ಬಡವರಿಗಾಗಿ, ರೈತರಿಗಾಗಿ, ಮಹಿಳೆಯರಿಗಾಗಿ, ದುಡಿಯುವ ವರ್ಗಕ್ಕಾಗಿ ಇರಲಿವೆ ಇದೊಂದು ಬಾರಿ ಅವಕಾಶ ನೀಡಿ ಎಂದ ಅವರು ರಾಷ್ಟೀಯ ಪಕ್ಷಗಳನ್ನು ನಂಬಿ ಜನ ಮೋಸ ಹೋಗಬಾರದು ಎಂದರು.
ಮಾಜಿ ಸಚಿವ, ಶಾಸಕ ಬಂಡೆಪ್ಪ ಖಾಸೆಂಪೂರ ಮಾತನಾಡಿ ಕಾಂಗ್ರೆಸ್ ಬಿಜೆಪಿಯವರು ಬರಿ ಬಾಯಿ ಮಾತಿನ ಉದ್ರೀ ಮಂದಿ ಇದ್ದಾರೆ, ನಮ್ಮ ಕುಮಾರಸ್ವಾಮಿ ಅವರು ರೈತರ, ಬಡವರ ಕಣ್ಣಿರು ಒರೆಸುವ ನಗದಿ ಮನುಷ್ಯರಾಗಿದ್ದಾರೆ. ಇಂತವರಿಗೆ ಕೈ ಬಿಡಬೇಡಿ ಎಂದು ಜನರಲ್ಲಿ ಮನವಿ ಮಾಡಿದರು. ಶರಣಗೌಡ ಕಂದಕೂರ ಮಾತನಾಡಿ ದಿ. ವಿಠ್ಠಲ್ ಹೇರೂರ ಅವರನ್ನು ಜೆಡಿಎಸ್ ಪಕ್ಷ ಮುಖ್ಯಸಚೇತಕ ಹುದ್ದೆ ನೀಡಿ ಗೌರವಿಸಿದಂತೆ ನಿಮಗೂ ಉತ್ತಮ ಸ್ಥಾನಮಾನ ನೀಡಲಿದೆ, ನಾಟಿಕಾರ ಶಾಸಕರಾಗುವ ತನಕ ನಾವೆಲ್ಲ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ಅಭಯ ನೀಡಿದರು.
ಮುಖಂಡ ಶಿವಕುಮಾರ ನಾಟಿಕಾರ ಮಾತನಾಡಿ ಹೋರಾಟದ ಶಕ್ತಿಗಳು ತಾಲೂಕಿನಲ್ಲಿ ಹುಟ್ಟದೇ ಇದ್ದರೆ ದುಷ್ಟ ಶಕ್ತಿಗಳ ಅಟ್ಟಹಾಸ ಹೆಚ್ಚುತ್ತಿತ್ತು. ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಹಿಂದುಳಿದ ವರ್ಗದವರ ಮತ ಪಡೆದು ೬ ಬಾರಿ ಶಾಸಕರಾಗಿ ಜನ ಕಲ್ಯಾಣ ಮಾಡದೆ ಮೋಸ ಮಾಡಿದ್ದಲ್ಲದೆ ಹಿಂದುಳಿದ ವರ್ಗದವರನ್ನು ತುಳಿಯುವ ಕೆಲಸ ಮಾಡಿದ್ದಾರೆ, ಹಾಲಿ ಶಾಸಕ ಎಂ.ವೈ ಪಾಟೀಲ್ ನಮ್ಮಿಂದ ಲಾಭ ಪಡೆದು ಬಳಸಿಕೊಂಡು ಬೀಸಾಡಿದ್ದಾರೆ, ಇಬ್ಬರಿಗೂ ಜಾತಿ, ಧರ್ಮ, ರಾಜಕೀಯ ಬದ್ದತೆ ಯಾವುದೂ ಇಲ್ಲ, ಇಬ್ಬರೂ ಕೂಡಿಕೊಂಡು ಬೆಳೆಯುತ್ತಿರುವವರನ್ನು ತುಳಿಯುವ ಕೆಲಸ ಮಾಡಿದ್ದಾರೆ ಎಂದರು.
ಈ ಬಾರಿಯಾದರೂ ಮತದಾರ ಬಂಧುಗಳು ಎಚ್ಚರಿಕೆಯಿಂದ ಮತ ಚಲಾಯಿಸಿ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿದರೆ ನಿಮ್ಮ ಎಲ್ಲಾ ಕನಸುಗಳು ನನಸಾಗಲಿವೆ, ನಾನು ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ, ಅದಕ್ಕೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ ಮಾತನಾಡಿದರು. ಮಲ್ಲಿಕಾರ್ಜುನ ಸಿಂಗೆ ಸ್ವಾಗತಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಾಲರಾಜ್ ಗುತ್ತೇದಾರ, ಸಂಜೀವನ ಯಾಕಾಪೂರ, ಶಾಮರಾವ ಸೂರನ್, ಕೇದಾರಲಿಂಗಯ್ಯ ಹಿರೇಮಠ, ರಾಜು ಉಕ್ಕಲಿ, ಶ್ರೀಕಾಂತ ದಿವಾನಜಿ, ಅಮರಸಿಂಗ ರಜಪೂತ, ಜಮೀಲ್ ಗೌಂಡಿ, ಸಂತೋಶ್ರೀ ಕಾಳೆ, ಶಂಕರಗೌಡ ಭಾಸಗಿ, ಅಮೂಲ ಮೋರೆ,ಮಂಜುನಾಥ ನಾಯಕೋಡಿ ಸೇರಿದಂತೆ ಅನೇಕರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: