ರಾಯಚೂರು: ಸಮಾಜದ ಮುಖಂಡರಾದ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷರಾಗಿದ್ದ ದಿ.ಯು.ದೊಡ್ಡ ಮಲ್ಲೇಶಪ್ಪ ಪ್ರತಿಷ್ಠಾನ ವತಿಯಿಂದ ಜ.೦೫ ರಂದು ನಡೆಯುವ ಉಚಿತ ಮೇಗಾ ಆರೋಗ್ಯ ತಪಾಸಣಾ ಶಿಬಿರಕ್ಕೆ ಮುನ್ನೂರುಕಾಪು ಸಮಾಜದಿಂದ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಲು ಪ್ರತಿಯೊಬ್ಬ ಸಮಾಜದ ಮುಖಂಡರು ಮುಂದಾಗುವಂತೆ ಮಾಜಿ ಶಾಸಕ ಹಾಗೂ ಮುನ್ನೂರುಕಾಪು ಸಮಾಜದ ಹಿರಿಯ ನಾಯಕರಾದ ಎ.ಪಾಪಾರೆಡ್ಡಿ ಮನವಿ ಮಾಡಿದರು.
ಇಂದು ವೀರಾಂಜಿನೇಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಈ ಒಂದು ಮೇಗಾ ಆರೋಗ್ಯ ಶಿಬಿರ ಅತ್ಯಂತ ಮಹತ್ವದ್ದಾಗಿದೆ. ಮುನ್ನೂರುಕಾಪು ಸಮಾಜದಿಂದ ಈ ರೀತಿಯ ಒಂದು ಆರೋಗ್ಯ ಶಿಬಿರ ನಿರ್ವಹಿಸುವ ಯೋಚನೆ ಮಾಡಲಾಗಿತ್ತು. ಮುನ್ನೂರುಕಾಪು ಸಮಾಜದ ಯುವಕರು ಸಹ ಈ ಬಗ್ಗೆ ಆಲೋಚನೆ ಮಾಡಿದ್ದರು. ಆದರೆ, ಅನಿವಾರ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಇಂತಹದೊಂದು ಶಿಬಿರ ಆಯೋಜನೆ ಸಹಕಾರಗೊಂಡಿರಲಿಲ್ಲ.ಆದರೆ, ಈ ಕನಸು ಈಗ ಯು.ದೊಡ್ಡ ಮಲ್ಲೇಶಪ್ಪ ಪ್ರತಿಷ್ಠಾನದಿಂದ ನಡೆಯುತ್ತಿದೆ. ಯು.ದೊಡ್ಡ ಮಲ್ಲೇಶಪ್ಪ ಅವರ ಕುಟುಂಬ ಈ ಕಾರ್ಯಕ್ರಮ ನಿರ್ವಹಿಸುತ್ತಿದೆ. ಈ ಕಾರ್ಯಕ್ರಮ ಅವರ ಕುಟುಂಬದಿಂದ ನಡೆಯುತ್ತಿದ್ದರೂ, ಮುನ್ನೂರುಕಾಪು ಸಮಾಜದ ಪ್ರತಿಯೊಬ್ಬರು ಇದಕ್ಕೆ ಸಹಕಾರ ನೀಡುವ ಮೂಲಕ ಈ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿದೆ. ಬೆಂಗಳೂರಿನ ಅನೇಕ ವೈದ್ಯರು ಈ ಆರೋಗ್ಯ ತಪಾಸಣಾ ಶಿಬಿರಕ್ಕೆ ಆಗಮಿಸುತ್ತಿದ್ದಾರೆ. ಇಂತಹದೊಂದು ಉಚಿತ ಮೇಗಾ ಶಿಬಿರದ ಲಾಭ ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ಮುನ್ನೂರುಕಾಪು ಸಮಾಜದ ಎಲ್ಲರೂ ಇದರಲ್ಲಿ ಪಾಲ್ಗೊಂಡು ಹೆಚ್ಚಿನ ಜನರಿಗೆ ಇದರ ಅನುಕೂಲ ದೊರೆಯುವಂತೆ ಮಾಡಬೇಕಾಗಿದೆ.
ಶಾಸಕ ಡಾ.ಶಿವರಾಜ ಪಾಟೀಲ್ ಅವರು ಈ ಶಿಬಿರದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಅವರು ಸ್ವತಃ ವೈದ್ಯರಾಗಿರುವುದರಿಂದ ಹೆಚ್ಚಿನ ವೈದ್ಯರು ಮತ್ತು ಅತ್ಯುತ್ತಮ ಸೇವೆ ನಿರ್ವಹಿಸಿದವರು ಈ ಶಿಬಿರಕ್ಕೆ ಆಗಮಿಸುತ್ತಿದ್ದಾರೆ. ಇಂತಹದೊಂದು ಸದುಪಯೋಗವನ್ನು ಸಾರ್ವಜನಿಕರು ಪಡೆಯುವಂತೆ ನಾವು ಸಮಾಜದ ವತಿಯಿಂದ ನೆರವು ನೀಡುವ ಅಗತ್ಯವಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಬಿ.ಆಂಜಿನೇಯ್ಯ, ರಾಳ್ಳ ತಿಮ್ಮಾರೆಡ್ಡಿ, ಪುಂಡ್ಲ ನರಸರೆಡ್ಡಿ, ಜಿ.ಬಸವರಾಜ ರೆಡ್ಡಿ, ಎಸ್.ವೆಂಕಟರೆಡ್ಡಿ, ಭಂಗಿ ನರಸರೆಡ್ಡಿ, ಕುಕ್ಕಲ ನರಸರೆಡ್ಡಿ, ವಿ.ಲಕ್ಷ್ಮೀರೆಡ್ಡಿ, ಜಿ.ತಿಮ್ಮಾರೆಡ್ಡಿ, ಎನ್.ಶ್ರೀನಿವಾಸ ರೆಡ್ಡಿ, ಪೋಗಲ್ ಶ್ರೀನಿವಾಸ ರೆಡ್ಡಿ, ಜಿ.ತಿಮ್ಮಾರೆಡ್ಡಿ, ಜಿ.ಮಹೇಂದ್ರ ರೆಡ್ಡಿ, ಯು.ಲಿಂಗಾರೆಡ್ಡಿ, ಬಿ.ಶೇಖರ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.