ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ
ವಿಜಯಪುರ : ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ, ಅದಕ್ಕಿಂತಲೂ ಪ್ರಮುಖವಾದ ಒಳ ಮೀಸಲಾತಿ ಲೋಪದೋಷ ಸರಿಪಡಿಸಲು, ಖಾಲಿ ಇರುವ ಹುದ್ದೆ ಭರ್ತಿ ಮೊದಲಾದ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಿರಿ ಅದನ್ನು ಬಿಟ್ಟು ರಾಜಕೀಯ ಉದ್ದೇಶ ಇರಿಸಿಕೊಂಡು ವಿಶೇಷ ಅಧಿವೇಶನ ಕರೆಯುತ್ತಿರುವುದು ಯಾವ ಕಾರಣಕ್ಕೂ ಸರಿಯಲ್ಲ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿರುವ ಅವರು, ದಿ.೨೨ ರಿಂದ ದಿ.೩೧ ರವರೆಗೆ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಮುಂದಾಗಿದೆ, ರಾಜ್ಯದಲ್ಲಿ ಗಂಭೀರವಾದ ಸಮಸ್ಯೆಗಳಿವೆ, ಪ್ರಮುಖವಾಗಿ ಒಳ ಮೀಸಲಾತಿ ವಿಷಯವಾಗಿ ಆಗಿರುವ ಗೊಂದಲಗಳ ನಿವಾರಣೆಗಾಗಿ, ರಾಜ್ಯದಲ್ಲಿ ಖಾಲಿ ಇರುವ ೨.೭೩ ಲಕ್ಷ ಹುದ್ದೆ ಭರ್ತಿಯ ಬಗ್ಗೆ ಮಹತ್ವದ ತೀರ್ಮಾನ ಇರಿಸುವ ಬಗ್ಗೆ, ನೀರಾವರಿ ಯೋಜನೆಗಳ ಬಗ್ಗೆ ಹಾಗೂ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಚರ್ಚೆಗೆ ವಿಶೇಷ ಅಧಿವೇಶನ ಕರೆಯುವುದನ್ನು ಬಿಟ್ಟು ಯೋಜನೆ ಹೆಸರು ಬದಲಾವಣೆ ಯಾಗಿರುವ ಬಗ್ಗೆ ಖಂಡನಾ ನಿರ್ಣಯ ಮಂಡಿಸಲು ವಿಶೇಷ ಅಧಿವೇಶನ ಕರೆಯುವ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ಅಧಿವೇಶನದ ಆಶಯಗಳನ್ನೇ ಗಾಳಿಗೆ ತೂರುತ್ತಿದೆ.
ಈ ಹಿಂದೆಯೂ ವಿಶೇಷ ಅಧಿವೇಶನಗಳು ನಡೆದಿದ್ದವು,
ಉದಾಹರಣೆಗೆ ಅವಲೋಕಿಸುವುದಾದರೆ ೧೯೯೧ ರ ಡಿ.೧ ರಂದು ದಿ.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕಾವೇರಿ ಸುಗ್ರೀವಾಜ್ಞೆ ಕಾವೇರಿ ವಿಷಯವಾಗಿ ಮಧ್ಯಂತರ ತೀರ್ಪು ವಿರೋಧಿಸಿ ಸುಗ್ರೀವಾಜ್ಞೆ ಹೊರಡಿಸಲು,
೧೯೯೭ ರ ಆಗಸ್ಟ್ ೨ ರಂದು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ವೇಳೆ
ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಕಲಾಪ, ಕಾವೇರಿ ಬಿಕ್ಕಟ್ಟು ವಿಷಯವಾಗಿ ನೀರು ಬಿಡಲು ಅಸಾಧ್ಯದ ನಿರ್ಣಯ ಮಂಡಿಸುವ ನಿಟ್ಟಿನಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅಕ್ಟೋಬರ್ ೩, ೨೦೦೨ ರಂದು, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ೨೦೦೬ ರ ಸೆ.೪ ರಂದು ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭಿಸುವ ನಿಟ್ಟಿನಲ್ಲಿ ಹೀಗೆ ಹಲವಾರು ಮಹತ್ವದ ಕಾರಣಗಳಿಗಾಗಿ ೧೧ ವಿಶೇಷ ಅಧಿವೇಶನಗಳು ನಡೆದಿವೆ, ಆದರೆ ಮಹತ್ವದ ಉದ್ದೇಶವಿಲ್ಲದೇ ನಡೆಯುತ್ತಿರುವ ಪ್ರಥಮ ಅಧಿವೇಶನ ಇದಾಗಿದೆ ಎಂಬುದು ತೋರುತ್ತಿದೆ.
ಒಳ ಮೀಸಲಾತಿ ಗೊಂದಲದಿಂದಾಗಿ ಖಾಲಿ ಹುದ್ದೆಗಳು ಭರ್ತಿಯಾಗುತ್ತಿಲ್ಲ, ಬಡ್ತಿ ಸೌಲಭ್ಯ ನಿಂತು ಹೋಗಿದೆ, ಶಿಕ್ಷಣ ಇಲಾಖೆಯಲ್ಲಿ ೬೯,೮೦೦ ಹುದ್ದೆ, ಆರೋಗ್ಯ ಇಲಾಖೆಯಲ್ಲಿ ೩೪ ಸಾವಿರಕ್ಕೂ ಅಧಿಕ ಹುದ್ದೆ ಖಾಲಿ ಇವೆ.
ರಾಜ್ಯದಲ್ಲಿ ಒಳ ಮೀಸಲಾತಿ ಗೊಂದಲ ನಿವಾರಣೆಗಾದರೂ ವಿಶೇಷ ಅಧಿವೇಶನ ಕರೆದರೆ ಸರ್ಕಾರದ ನಡೆಯನ್ನು ನಾವು ಸ್ವಾಗತಿಸುತ್ತಿದ್ದೆವು, ನೀರಾವರಿ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿವೇಶನ ಕರೆಯಬೇಕಿತ್ತು, ಆದರೆ ಈ ಎಲ್ಲ ಮಹತ್ವದ ಅಂಶ ಬಿಟ್ಟು ರಾಜಕೀಯ ಹಠ ಸಾಧಿಸಿಕೊಳ್ಳಲು ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ ಎಂದು ಕಾರಜೋಳ ಹೇಳಿದ್ದಾರೆ.


















