ರಾಯಚೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಮುಂದುವರೆಸಬೇಕೆಂದು ಪ್ರತಿಭಟಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಹಿಂದುಳಿದ ವರ್ಗಗಳಿಗೆ ರಾಜ್ಯ ಮೀಸಲಾತಿ ನೀಡಬೇಕೆಂದು ಸಂವಿಧಾನದಲ್ಲಿ ಹೇಳಿರುವಂತೆ ಕರ್ನಾಟಕ ಪಂಚಾಯತರಾಜ್ ಕಾಯ್ದೆ ರಚನೆಯಾಗಿದ್ದು ಇದುವರೆಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯದ ಹಿಂದುಳಿದ ವರ್ಗದವರು ಶೇ ೩೫% ರಷ್ಟು ಜನಸಂಖ್ಯೆ ಇರುವ ಕಾರಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ, ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ, ಪಟ್ಟಣ ಪಂಚಾಯತ, ನಗರಸಭೆ, ಪುರಸಭೆ, ಮಹಾನಗರಪಾಲಕೆ, ಸಹಕಾರ ಸಂಘಗಳು ಸೇರಿದಂತೆ ಶೇಕಡಾ ೨೭%ರಷ್ಟು ಸ್ಥಾನಗಳನ್ನು ಮೀಸಲು ಇಡುವಂತಹ ಕಾನೂನನ್ನು ಜಾರಿಗೆ ತಂದು ರಾಜ್ಯ ಮೀಸಲಾತಿಯನ್ನು ಹಿಂದುಳಿದ ಸಮುದಾಯಗಳಿಗೆ ಇದುವರೆವಿಗೂ ನೀಡಿದ್ದು ಸಾಮಾಜಿಕ ನ್ಯಾಯ ಒದಗಿಸಿದ ಹೆಮ್ಮೆ ಕರ್ನಾಟಕ ರಾಜ್ಯದಾಗಿದೆ.
ಆದರೆ ಇತ್ತೀಚೆಗೆ ಸುಪ್ರಿಂಕೋರ್ಟ ನಿರ್ದೇಶನದಂತೆ ನಿಖರ ಅಂಕಿ ಅಂಶಗಳ ಆಧಾರದಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಜನರಿಗೆ ಶೇಕಡಾ ೨೭% ರಷ್ಟು ಮೀಸಲಾತಿ ನೀಡಬೇಕೆಂದು ತಿಳಿಸಿದೆ. ಹಿಂದಿನ ಸರಕಾರವು ೨೦೧೫ ರಲ್ಲಿ ಹೆಚ್, ಕಾಂತರಾಜ್ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಜನಗಣತಿ ಸಮೀಕ್ಷಾ ವರಯನ್ನು ಸರಕಾರವು ತಕ್ಷಣವೇ ಸ್ವೀಕರಿಸಿ ಸಮರ್ಪಕ ವರದಿಯ ಮಾಹಿತಿಯನ್ನು ಸುಪ್ರಿಂಕೋರ್ಟಗೆ ನೀಡುವ ಮೂಲಕ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಲು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ನ್ಯಾಯಬದ್ಧವಾದ ಮೀಸಲಾತಿಯನ್ನು ಮುಂದುವರೆಸಬೇಕು ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆದಷ್ಟು ಶೀಘ್ರವಾಗಿ ನಡೆಸಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬೇಕೆಂದು ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ನಾಗೇಂದ್ರಪ್ಪ ಮಟಮಾರಿ ಆಗ್ರಹಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಈರಣ್ಣ, ನಗರ ಅಧ್ಯಕ್ಷರಾದ ವೆಂಕಟೇಶ್ ವಲ್ಲೂರು,ಗ್ರಾಮಾಂತರ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಗೌಡ, ಈರಣ್ಣ ವೀರಾಪುರ, ಜಿ.ತಿಮ್ಮಪ್ಪ ಯಾದವ್, ರಂಗನಾಥ ನವೋದಯ, ಸೇರಿದಂತೆ ಇತರರು ಸದಸ್ಯರು ಉಪಸ್ಥಿತರಿದ್ದರು.