ರಾಯಚೂರು: ಇಂದಿರಾ ಕ್ಯಾಂಟಿನ್‌ಗಳಲ್ಲಿ ಗುಣಮಟ್ಟದ ಆಹಾರ ಒದಗಿಸುವುದಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿರಾ ಕ್ಯಾಂಟಿನ್‌ಗೆ ಬರುವವರ ಸಂಖ್ಯೆ ಇಳಿಮುಖವಾಗಿರುವುದಕ್ಕೆ ಕಾರಣ ಏನು ಎಂಬುದನ್ನು ಕಂಡು ಹಿಡಿಯಬೇಕು. ಸರ್ಕಾರವು ಜಾರಿಗೊಳಿಸಿದ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜನಜಾಗೃತಿ ಮೂಡಿಸಬೇಕು. ಕ್ಯಾಂಟಿನ್‌ಗಳು ಆರಂಭವಾದಾಗಿನಿಂದ ಇಲ್ಲಿಯವರೆಗೂ ಜನರು ಎಷ್ಟರ ಮಟ್ಟಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಾಸ್ತವ ಅಂಕಿಅಂಶ ಸಂಗ್ರಹಿಸಿಕೊಳ್ಳಬೇಕು. ಲೋಪಗಳನ್ನು ಸರಿಪಡಿಸಲು ಕೂಡಲೇ ಕ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಹೇಂದ್ರಕುಮಾರ್ ಮಾತನಾಡಿ, ಇಂದಿರಾ ಕ್ಯಾಂಟಿನ್‌ಗಳನ್ನು ಜನದಟ್ಟಣೆ ಇರುವ ಕಡೆಗಳಲ್ಲಿಯೇ ಸ್ಥಾಪನೆ ಮಾಡಲಾಗಿದ್ದು, ಪ್ರತಿದಿನ ನಿಗದಿತ ಗುರಿ ತಲಪಲೇ ಬೇಕು. ಬೇಡಿಕೆಯನ್ನು ಇನ್ನೂ ಹೆಚ್ಚಿಸುವುದಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ ಎಂಟು ಕ್ಯಾಂಟಿನ್‌ಗಳಿವೆ. ಗುಣಮಟ್ಟದ ಆಹಾರ ಒದಗಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
‘ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಂಟಿನ್‌ಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ನಿಗದಿತ ಗುರಿ ತಲುಪಲೇ ಬೇಕು. ಕಡಿಮೆ ದರದಲ್ಲಿ ಊಟ, ಉಪಹಾರ ದೊರೆಯುತ್ತಿದೆ ಎನ್ನುವ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು. ಕ್ಯಾಂಟಿನ್‌ಗಳಿಗೆ ಗುತ್ತಿಗೆದಾರರಿಂದ ಆಹಾರ ಪೂರೈಸುವಲ್ಲಿ ಗುಣಮಟ್ಟ ಇದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಗೋಪಶೆಟ್ಟಿ, ನಗರಸಭೆ ಪೌರಾಯುಕ್ತ ಕೆ.ಮುನಿಸ್ವಾಮಿ ಹಾಗೂ ವಿವಿಧ ತಾಲ್ಲೂಕುಗಳ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿದ್ದರು.