ಇಂಡಿ | 38 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ..! ಏಕೆ..?
ಇಂಡಿ: ತಾಲ್ಲೂಕಿನ ೩೮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಪ್ರತೀ ಗ್ರಮದಲ್ಲೂ ಕುಡಿಯುವ ನೀರಿನ ತೊಂದರೆ ಉದ್ಭವಿಸಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಪ್ರತೀ ಗ್ರಾಮಗಳಿಗೆ ಜನ ಜೀವನ್ ಮಶಿನ್ ಯೋಜನೆಯ ಅಡಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕಳೆದ ಒಂದು ವಾರದಿಂದ ನೀರು ಪೂರೈಕೆಯಾಗದೇ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಕೇಳಿದರೆ ಜನ ಜೀವನ್ ಮಶಿನ್ ಅಡಿಯಲ್ಲಿ ನೀರು ಸರಬರಾಜು ಮಾಡುವ ಟೆಂಡರುದಾರರಿಗೆ ಬರಬೇಕಾದ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಅವರು ನೀರು ಬಿಡುವದನ್ನು ಸ್ಥಗಿತಗೊಳಿಸಿದ್ದಾರೆ. ನೀರು ಪೂರೈಕೆ ಮಾಡುವ ಕೆರೆಗಳಲ್ಲಿ, ಬೋರವೆಲ್ ಗಳಲ್ಲಿ ಮತ್ತು ಇತರೇ ನೀರಿನ ಮೂಲಗಳಲ್ಲಿ ಸಾಕಷ್ಟು ನೀರು ಇದ್ದರೂ ಕೂಡಾ ಟೆಂಡರುದಾರರು ಕಳೆದ ಆರು ತಿಂಗಳಿAದ ಬಿಲ್ಲು ಪಾವತಿಯಾಗದಿರುವದರಿಂದ ನೀರು ಸರಬರಾಜು ಮಾಡುವದನ್ನು ನಿಲ್ಲಿಸಿದ್ದಾರೆ.
ಈ ಕುರಿತು ನೀರು ಸರಬರಾಜು ಮಾಡುವ ಗುತ್ತಿಗೆದಾರರನ್ನು ಕೇಳಿದರೆ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಅದಲ್ಲದೇ ಜಿಲ್ಲೆಯ ಎಲ್ಲಾ ಗುತ್ತಿಗೆದಾರರು ರಾಜ್ಯ ಮಟ್ಟದಲ್ಲಿ ಈ ಬಗ್ಗೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಆದರೂ ಕೂಡಾ ಹಣ ಬಿಡುಗಡೆಯ ಸೂಚನೆಗಳು ಕಂಡು ಬಂದಿಲ್ಲ. ಹೀಗಾಗಿ ಗ್ರಾಮಗಳ ಜನತೆ ಇನ್ನೂ ಎಷ್ಟು ದಿವಸ ನೀರಿಲ್ಲದೇ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಲು ಬಾರದಂತಾಗಿದೆ. ಗ್ರಾಮೀಣ ಪ್ರದೇಶದ ಜನತೆಯ ಸ್ಥಿತಿ “ದೇವರು ಒರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ” ಎನ್ನುವಂತಾಗಿದೆ.
ಈ ಬಗ್ಗೆ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎಚ್.ಕನ್ನೂರ ಅವರನ್ನು ಸಂಪರ್ಕಿಸಿದಾಗ ಗುತ್ತಿಗೆದರರಿಗೆ ಸರಕಾರದಿಂದ ಪಾವತಿಸಬೇಕಾದ ಬಿಲ್ ಪಾವತಿಯಾಗದ ಕಾರಣ ನೀರು ಸರಬರಾಜು ನಿಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಜೆಜೆಎಂ ನೀರು ಸ್ಥಗಿತಗೊಂಡಿದ್ದು ನಿಜ. ಗುತ್ತಿಗೆದಾರರಿಗೆ ಬಿಲ್ ಜಮಾ ಆಗಿಲ್ಲ. ಹೀಗಾಗಿ ಅವರು ನೀರು ಬಿಡುತ್ತಿಲ್ಲ. ನಾವು ಅವರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಆದರೆ ಅವರು ಯಾವುದಕ್ಕೂ ಜಗ್ಗುತ್ತಿಲ್ಲ. ಈ ಕುರಿತು ಈಗಾಗಲೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬಿಲ್ ಜಮಾ ಮಾಡುವವರೆಗೂ ನಾವು ನೀರು ಬಿಡುವುದಿಲ್ಲ ಎಂದು ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.
ರಾಮಚಂದ್ರ ಬಂಡಿ. ಎಇಇ ಗ್ರಾಮೀಣಾಭಿವೃಧ್ಧಿ ಹಾಗೂ ಕುಡಿಯುವ ನೀರು ಇಲಾಖೆ.
ನಮ್ಮ ವಾರ್ಡಿನಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರು ಬಂದಿಲ್ಲ. ಈ ಕುರಿತು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ತಿಳಿಸದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಇರುವ ಕಡೆ ಬೋರವೆಲ್ ಕೊರೆಯಿಸಿ ಜನರಿಗೆ ಅನುಕೂಲ ಕಲ್ಪಿಸಿ ಕೊಡಬೇಕು.
ಅಶೋಕ ಖಂಡೇಕರ ಅಗರಖೇಡ ಗ್ರಾಮಸ್ಥ.
ಇಂಡಿ: ತಾಲ್ಲೂಕಿನ ಅಗರಖೇಡ ಗ್ರಾಮಗಳಲ್ಲಿ ಇರುವ ನಲ್ಲಿಗಳಲ್ಲಿ ನೀರಿಗಾಗಿ ಕಾಯುತ್ತಿರುವ ಗ್ರಾಮಸ್ಥರು.



















