ಇಂಡಿ | ಪಿಎಸ್ಐ, ಸಿಪಿಐ,ಡಿವೈಎಸ್ಪಿ ಅಮಾನತಿಗೆ ಸರಾಫ ಅಂಗಡಿಕಾರರು ಆಗ್ರಹ..!
ಇಂಡಿ: ಕಾನೂನನ್ನು ರಕ್ಷಿಸಬೇಕಾದ ಪೊಲೀಸರೇ ಭಕ್ಷಕರಾಗುತ್ತಿದ್ದಾರೆ, ಸುಖಾ ಸುಮ್ನೆ ಬಂಗಾರ ಅಂಗಡಿಗಳ ಮಾಲೀಕನ ಮೇಲೆ ಸಿಂದಗಿ ಹಾಗೂ ಆಲಮೇಲ ಪೊಲೀಸರು ಹಲ್ಲೆ ನಡೆಸಿ ಯುವಕನ ಹಲ್ಲು ಮುರಿದಿದ್ದಾರೆ. ಮಾಡದ ತಪ್ಪನ್ನು ಮಾಡಿದ್ದೇನೆ ಒಪ್ಪಿಕೋ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಇಂಡಿ ಬಂಗಾರ ಆಭರಣಗಳ ತಯಾರಕರು ಹಾಗೂ ಮಾರಾಟಗಾರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಆರೋಪಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೊಲೀಸರು ಮಾಹಿತಿ ನೀಡದೆ ನೋಟಿಸ್ ಜಾರಿಗೊಳಿಸದೆ ತಮ್ಮ ಸಮವಸ್ತ್ರದಲ್ಲಿಯೂ ಬರದೆ ಖಾಸಗಿ ವಾಹನದಲ್ಲಿ ಬಂದು ಒಬ್ಬ ಬಂಗಾರ ಅಂಗಡಿಯ ಮಾಲೀಕನನ್ನು ಬಾಯಿಗೆ ಬಂದAತೆ ಅವಾಚ್ಯ ಶಬ್ದಗಳಿಂದ ನಂಬಿಸಿದ್ದಲ್ಲದೆ ತಮಗೆ ಮನಬಂದAತೆ ಥಳಿಸಿದ್ದಾರೆ. ಕಳ್ಳತನದ ಬಂಗಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದರೂ ನೀನು ತೆಗೆದುಕೊಂಡಿಲ್ಲವಾದರೂ ಸಹ ತೆಗೆದುಕೊಂಡಿದ್ದೇನೆ ಎಂದು ಒಪ್ಪಿಕೋ. ಇಲ್ಲವಾದಲ್ಲಿ ನಿನ್ನ ಮೇಲೆ ಪ್ರಕರಣ ದಾಖಲಿಸಿ ಒದ್ದು ಒಳಗೆ ಹಾಕುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಇಂಡಿ ಡಿವೈಎಸ್‌ಪಿ ಸದಾಶಿವ ಕಟ್ಟಿಮನಿ, ಸಿಂದಗಿ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ, ಆಲಮೇಲ ಪಿಎಸ್‌ಐ ಅರವಿಂದ ಅಂಗಡಿ, ಹಾಗೂ ಐದು ಜನ ಸಿಬ್ಬಂದಿ ಬಂಗಾರ ಅಂಗಡಿ ಮಾಲೀಕ ಮಹಾಂತೇಶ್ ಅರ್ಜುಣಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ, ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದಾಗ ಪ್ರಕರಣವನ್ನು ದಾಖಲಿಸಿಕೊಳ್ಳದೆ ಸಮಯ ವ್ಯಯಿಸುವ ಕಾರ್ಯ ಮಾಡಿದ್ದಾರೆ, ಬಂಗಾರ ಅಂಗಡಿಗಳ ಮಾಲೀಕರು ಹಾಗೂ ತಯಾರಕರ ಸಂಘದ ಸದಸ್ಯರು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭೇಟಿ ಮಾಡಿ ನಡೆದ ಸಂಗತಿಗಳನ್ನು ತಿಳಿಸಿದ್ದೇವೆ, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ, ಕೂಡಲೆ ತನಿಖೆ ಆರಂಭಿಸಿ ತಪ್ಪಿತಸ್ಥ ಇಂಡಿ ಡಿವೈಎಸ್‌ಪಿ, ಸಿಂದಗಿ ಸಿಪಿಐ ಹಾಗೂ ಆಲಮೇಲ ಪಿಎಸಐ ಮತ್ತು ಐದು ಜನ ಪೊಲೀಸ್ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾವು ಕಾನೂನು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪೊಲೀಸರು ಕಾನೂನು ವ್ಯವಸ್ಥೆಯಲ್ಲಿ ಬಂದು ತನಿಖೆ ಮಾಡಲಿ ತಮಗೆ ಕಾನೂನು ಅನ್ವಯಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಕೇವಲ ಬಡವರಿಗೆ ಮಧ್ಯಮ ವರ್ಗದವರಿಗೆ ಮಾತ್ರ ಕಾನೂನು ಅನ್ವಯಿಸುತ್ತದೆಯೋ ಹೇಗೆ ಅದನ್ನು ಪೊಲೀಸರೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಸ್ವತಃ ಗೃಹ ಮಂತ್ರಿ ಡಾ. ಜಿ. ಪರಮೇಶ್ವರ ಅವರು ಬಂಗಾರದ ಅಂಗಡಿಗಳಿಗೆ ತನಿಖೆಗೆ ಹೋಗಬೇಕಾದರೆ ಕಡ್ಡಾಯವಾಗಿ ಪೊಲೀಸರು ಅವರಿಗೆ ನೋಟಿಸ್ ಜಾರಿ ಮಾಡಿ, ಸಮವವಸ್ತç ಧರಿಸಿಕೊಂಡು, ಸರಕಾರಿ ವಾಹನದಲ್ಲೇ ಹೋಗಬೇಕೆಂದು ಆದೇಶಿಸಿದ್ದರೂ ಪೊಲೀಸ್ ಇಲಾಖೆ ಗೃಹ ಮಂತ್ರಿಗಳ ಆದೇಶಕ್ಕೇ ಬೆಲೆಯೇ ಕೊಡುತ್ತಿಲ್ಲ ಎಂದು ದೂರಿದರು.
ತನಿಖೆಯ ಸಂದರ್ಭದಲ್ಲಿ ಐದು ಬಿಳಿ ಖಾಲಿ ಹಾಳಿಗಳ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. ಅಂಗಡಿ ಮಾಲೀಕನ ವಿರುಧ್ಧ ದೊಡ್ಡ ಶಡ್ಯಂತ್ರ ನಡೆದಿದೆ ಎಂದರು.
ಶ್ರೀಶೈಲ ಅರ್ಜುಣಗಿ, ಸಂದೀಪ ಧನಶೆಟ್ಟಿ, ನಾಮದೇವ ಡಾಂಗೆ, ವಿಜಯಕುಮಾರ ಮಹೇಂದ್ರಕರ, ಪ್ರಭು ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಪತ್ರಿಕಾಗೋಷ್ಠಿಯಲ್ಲಿ ಬಂಗಾರ ಆಭರಣಗಳ ತಯಾರಿಕೆದಾರರು ಹಾಗೂ ಮಾರಾಟಗಾರರ ಸಂಘದ ಅಧ್ಯಕ್ಷ ಸೋಮುಗೌಡ ಬಿರಾದಾರ ಮಾತನಾಡಿದರು.



















