ಆಸ್ಟ್ರೇಲಿಯಾ ವಿರುದ್ಧ ಐಸಿಸಿ ವಿಶ್ವಕಪ್ 2023 ರಲ್ಲಿ ಗೆಲುವಿನ ಶುಭಾರಂಭ ಮಾಡಿದ ಭಾರತ
ಐಸಿಸಿ ವಿಶ್ವಕಪ್ 2023 : ಚನ್ನೈನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ 199 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ 6 ವಿಕೆಟ್‌ಗಳ ಗೆಲುವು ಪಡೆಯಿತು.
ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 199 ರನ್ ಗಳಿಸಿತು. ತಂಡವನ್ನು ಈ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ್ದು ಭಾರತದ ಎಡಗೈ ಸ್ಪಿನ್ ಜೋಡಿ ರವೀಂದ್ರ ಜಡೇಜ (28ಕ್ಕೆ3) ಮತ್ತು ಕುಲದೀಪ್ ಯಾದವ್ (42ಕ್ಕೆ2) ಅವರು.
ಆದರೆ ಈ ಗುರಿ ಬೆನ್ನಟ್ಟಿದ ಆತಿಥೇಯ ಭಾರತ ಆರಂಭದಲ್ಲಿಯೇ ದೊಡ್ಡ ಆಘಾತ ಅನುಭವಿಸಿತು. ಎರಡು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಇಬ್ಬರೂ ಖಾತೆ ತೆರೆಯದೇ ನಿರ್ಗಮಿಸಿದರು. ಮಿಚೆಲ್ ಸ್ಟಾರ್ಕ್ ಹಾಕಿದ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಕಿಶನ್ ಅವರು ಕ್ಯಾಮರಾನ್ ಗ್ರೀನ್‌ಗೆ ಕ್ಯಾಚಿತ್ತರು. ಜೋಷ್ ಹ್ಯಾಜಲ್‌ವುಡ್ ಹಾಕಿದ ಎರಡನೇ ಓವರ್‌ನಲ್ಲಿ ರೋಹಿತ್ ಅವರು ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಶ್ರೇಯಸ್ ಅಯ್ಯರ್, ಫೀಲ್ಡರ್ ಡೇವಿಡ್ ವಾರ್ನರ್‌ಗೆ ಸುಲಭ ಕ್ಯಾಚ್ ಕೊಟ್ಟು ಸೊನ್ನೆ ಸುತ್ತಿದರು. ಆಗ ಕ್ರೀಸ್‌ನಲ್ಲಿ ವಿರಾಟ್ ಇದ್ದರು.
ಅವರೊಂದಿಗೆ ಸೇರಿದ ಕನ್ನಡಿಗ ರಾಹುಲ್ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದರು. ಕೊಹ್ಲಿಗೆ ಸಿಕ್ಕ ಜೀವದಾನದಿಂದ ಇಬ್ಬರೂ ಸೇರಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 165 ರನ್ ಸೇರಿಸಿದರು. ಶತಕದತ್ತ ಹೆಜ್ಜೆ ಇಟ್ಟಿದ ಕೊಹ್ಲಿ 36ನೇ ಓವರ್‌ನಲ್ಲಿ ಹ್ಯಾಜಲ್‌ವುಡ್ ಎಸೆತವನ್ನು ಆಡಲು ಸ್ವಲ್ಪ ಗಡಿಬಿಡಿ ಮಾಡಿ ದಂಡ ತೆತ್ತರು.
ರಾಹುಲ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಒಂದು ಸಿಕ್ಸರ್ ಹೊಡೆದರು. ಇನ್ನೊಂದೆಡೆ ರಾಹುಲ್ ಕೂಡ ತಾಳ್ಮೆಯ ಕವಚ ಕಳಚಿಟ್ಟು ಬ್ಯಾಟ್ ಬೀಸಿದರು. ಪ್ಯಾಟ್ ಕಮಿನ್ಸ್ ಹಾಕಿದ 42ನೇ ಓವರ್‌ನಲ್ಲಿ ವಿಜಯದ ಸಿಕ್ಸರ್ ಹೊಡೆದರು.