ತಂದೆತಾಯಿ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ : ಮಲಘಾಣದ ಶಿಕ್ಷಣಪ್ರೇಮಿ ಬಿರಾದಾರ ಕುಟುಂಬದಿಂದ ಪ್ರೇರಣೀಯ ಸೇವೆ : ಎಸ್.ಎಸ್.ಗರಸಂಗಿ.
ವಿಜಯಪುರ : ಬಸವನಬಾಗೇವಾಡಿ ತಾಲ್ಲೂಕಿನ ಮಲಘಾಣದ ನಿವೃತ್ತ ಶಿಕ್ಷಕ ಲಿಂಗೈಕ್ಯ ಹಣಮಂತಗೌಡ ತಿಮ್ಮನಗೌಡ ಬಿರಾದಾರ ಹಾಗೂ ಅವರ ಧರ್ಮಪತ್ನಿ ಲಿಂ. ಕಸ್ತೂರಿ ಅವರ ಸ್ಮರಣಾರ್ಥ ಶಿಕ್ಷಣಪ್ರೇಮಿಗಳಾಗಿರುವ ಅವರ ಮೂವರು ಮಕ್ಕಳು ಕಳೆದ 6 ವರ್ಷಗಳಿಂದ ಗ್ರಾಮದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಪರಂಪರೆ ಮುಂದುವರೆಸಿಕೊಂಡು ಬಂದಿದ್ದು ಪ್ರೇರಣೀಯ ಸೇವೆಗೈಯುತ್ತಿದ್ದಾರೆ ಎಂದು ನಿವೃತ್ತ ಶಿಕ್ಷಕ ಎಸ್.ಎಸ್.ಗರಸಂಗಿ ಶ್ಲಾಘನೆ ವ್ಯಕ್ತಪಡಿಸಿದರು.
ಮಲಘಾಣದ ಆರಾಧ್ಯದೈವ ಸದ್ಗುರು ಸದಾನಂದ ಶಿವಯೋಗಿಗಳ 52 ನೇ ಪುಣ್ಯಾರಾಧನೆ ಹಾಗೂ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಶಿವಯೋಗಾಶ್ರಮದಲ್ಲಿ ಜರುಗಿದ ಧರ್ಮಸಭೆಯಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸುವ ವೇಳೆ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕ ಲಿಂ. ಹಣಮಂತಗೌಡ ತಿಮ್ಮನಗೌಡ ಬಿರಾದಾರ ಶಿಕ್ಷಕರಾಗಿದ್ದರೂ ಜೀವನದಲ್ಲಿ ಕಷ್ಟಪಟ್ಟು ಅವರ ಮೂವರು ಮಕ್ಕಳಾದ ಡಾ.ಮಹಾಂತೇಶ ಬಿರಾದಾರ, ಪಾಂಡುರಂಗ ಬಿರಾದಾರ ಹಾಗೂ ಡಾ.ವಾಸಂತಿ ಪಾಟೀಲ್ ಅವರಿಗೆ ನೈತಿಕ, ಮೌಲ್ಯಯುತ ಶಿಕ್ಷಣ ನೀಡಿ ಇಂದು ಎಲ್ಲರೂ ನೌಕರಸ್ಥರಾಗಿ ಉನ್ನತ ಸ್ಥಾನಮಾನದಲ್ಲಿದ್ದಾರೆ. ಸದ್ಯ ಮೂವರು ಮಕ್ಕಳು ತಂದೆತಾಯಿ ಸ್ಮರಣಾರ್ಥ ಗ್ರಾಮದ ಸೊಸೈಟಿಯಲ್ಲಿ ನಿಶ್ಚಿತ ಠೇವಣಿ ಹಣವಿಟ್ಟು ಅದರಿಂದ ಪ್ರತಿವರ್ಷ ಬರುವ ಒಂದು ಲಕ್ಷ ಬಡ್ಡಿ ಹಣದಲ್ಲಿ ಗ್ರಾಮದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ನೆರವು ನೀಡುತ್ತಿದ್ದಾರೆ. ಸಮಾಜಮುಖಿ ಸೇವೆ ಮೂಲಕ ಪ್ರತಿಷ್ಠಿತ ಬಿರಾದಾರ ಕುಟುಂಬ ನಮ್ಮ ಗ್ರಾಮದ ಹೆಮ್ಮೆಯ ಪ್ರತೀಕವಾಗಿದ್ದು, ಯುವಸಮೂಹಕ್ಕೆ ಹಾಗೂ ಇತರರಿಗೆ ಪ್ರೇರಣೆಯಾಗಿದೆ ಎಂದರು.
ಇದೇ ವೇಳೆ ಮಲಘಾಣ ಗ್ರಾಮದ ಪ್ರತಿಭಾನ್ವಿತ ದಂತ ವಿಜ್ಞಾನದ ವಿದ್ಯಾರ್ಥಿ ಅಭಿಷೇಕ ಸೀತಾರಾಮ ಚವ್ಹಾಣ ಇವರಿಗೆ ₹30,000, ಇಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಥಿನಿ ರಕ್ಷಿತಾ ಅಖಂಡಪ್ಪ ಯರನಾಳ ಇವರಿಗೆ ₹25,000, ಬಿಸಿಎ ವಿದ್ಯಾರ್ಥಿ ಮದನ ಚಿದಾನಂದ ವಠಾರ ಇವರಿಗೆ ₹15,000, ಪಿಯುಸಿ ವಾಣಿಜ್ಯ ವಿದ್ಯಾರ್ಥಿನಿಯರಾದ ಸುಧಾ ಎಸ್. ಕೋಲ್ಹಾರ, ಅರ್ಚನಾ ಎಸ್. ಕಲ್ಯಾಣಿ ಮತ್ತು ಬಿಎ ವಿದ್ಯಾರ್ಥಿ ಮುದಕಪ್ಪ ಹಣಮಂತ ಮಾದರ ಇವರುಗಳಿಗೆ ತಲಾ ₹10,000 ಪ್ರೋತ್ಸಾಹ ಧನವನ್ನು ವೇದಿಕೆಯಲ್ಲಿ ಸಾನಿಧ್ಯವಿದ್ದ ಪರಮಪೂಜ್ಯರು ವಿತರಣೆ ಮಾಡಿ ಆಶಿರ್ವದಿಸಿದರು. ಬೃಹತ್ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ದಿವ್ಯ ಸಾನಿಧ್ಯವಹಿಸಿದ್ದರು. ಇಂಗಳೇಶ್ವರ, ವಡವಡಗಿಯ ಬೃಂಗೀಶ್ವರ ಶಿವಾಚಾರ್ಯರು, ಶಾಂತಾನಂದ ಮಹಾಸ್ವಾಮಿಗಳು, ಸಂಗಮೇಶ್ವರ ಮಹಾಸ್ವಾಮಿಗಳು, ಜ್ಞಾನಮಯಾನಂದ ಮಹಾಸ್ವಾಮಿಗಳು, ಬಿದರಿಯ ಬಸಯ್ಯ ಸ್ವಾಮಿಗಳು, ನಾಗಲಿಂಗೇಶ್ವರ ಮಹಾರಾಜರ ಜ್ಞಾನಯೋಗಾಶ್ರಮದ ಸದಾನಂದ ಮಹಾರಾಜರು ಹಾಗೂ ವೇ. ವೀರಗಂಟಯ್ಯ ಹಿರೇಮಠ ಸಾನಿಧ್ಯವಿದ್ದರು. ಮುಖಂಡ ಸದಾನಂದ ನಿಂಗನೂರ ಸ್ವಾಗತಿಸಿದರು. ಹನುಮಂತ ಕಾಖಂಡಕಿ ನಿರೂಪಿಸಿ ವಂದಿಸಿದರು.