ಪುತ್ರಿಯರ ದಿನ- ಸ್ಪಂದನ’ ಕಾರ್ಯಕ್ರಮ ಉದ್ಘಾಟನೆ :ಅಧ್ಯಕ್ಷೆ ಕಾಂತಾ ನಾಯಕ
ವಿಜಯಪುರ: ಮಹಿಳೆಯರು ವೃತ್ತಿ ಆಧಾರಿತ ಕೌಶಲ್ಯಗಳನ್ನು ಕಲಿತು ಉದ್ಯಮಶೀಲತೆಯನ್ನು ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪುತ್ರಿಯರ ದಿನ- ಸ್ಪಂದನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಹೊಸ ತಂತ್ರಜ್ಞಾನ ಆಧಾರಿತ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಸಾಧಿಸಲು ಎಲ್ಲಾ ಕ್ಷೇತ್ರಗಳ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು. ಕೌಶಲ್ಯಗಳನ್ನು ಕಲಿತು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಆರ್ಥಿಕ ಸಬಲೀಕರಣ ಸಾಧಿಸಲು ಮಹಿಳೆಯರು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಹೊಸ ಕೌಶಲ್ಯಗಳನ್ನು ಕಲಿಯುವ ಮತ್ತು ಈಗಿರುವ ಕೌಶಲ್ಯಗಳನ್ನು ನವೀಕರಿಸುವ ಸಾಮರ್ಥ್ಯ ನಮಗಿರಬೇಕು. ಅದನ್ನು ಉತ್ತಮವಾಗಿ ಅರಿತುಕೊಂಡು ಬಳಸುವುದರಿಂದ ನಮ್ಮ ಗುರಿಗಳನ್ನು ತಲುಪುವುದು ಸಾಧ್ಯವಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಿವೆ, ಆದ್ದರಿಂದ ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವೂ ಮುನ್ನಡೆಯಬೇಕಾಗಿದೆ. ನಮ್ಮ ಸಂವಿಧಾನವು ಮಹಿಳೆಯರಿಗೆ ನೀಡಿರುವ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಮಹಿಳೆಯರು ನಿರ್ಧಾರ ತೆಗೆದುಕೊಳ್ಳುವಿಕೆಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ.ಬಿ. ಕೋರಿಶೆಟ್ಟಿ ಮಾತನಾಡಿ, ಇಂದಿನ ಯುಗ ಜ್ಞಾನಯುಗ. ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಆವಿಷ್ಕಾರ, ಉದ್ಯಮಶೀಲತೆ, ಸಂಶೋಧನೆ ಮತ್ತು ಜಾಗತೀಕರಣ ಎಲ್ಲವೂ ನಿಮ್ಮ ಕೈದೂರದಲ್ಲಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜಾಣ್ಮೆ ನಿಮ್ಮಲ್ಲಿ ಇರಬೇಕು ಎಂದರು.
ನಿಮ್ಮ ಕನಸು ದೊಡ್ಡದಾಗಿರಲಿ, ಆದರೆ ಅದನ್ನು ಸಾಧಿಸಲು ನಿಮ್ಮ ಶ್ರಮ ಇನ್ನೂ ದೊಡ್ಡದಾಗಿರಲಿ. ಈ ಕ್ಯಾಂಪಸ್ ನಿಮ್ಮ ಪ್ರತಿಭೆಯ ಪ್ರಕಾಶನಕ್ಕೆ ಬೆಂಬಲ ನೀಡುವ ಸ್ಥಳವಾಗಿದೆ. ಅಕಾಡೆಮಿಕ್ಸ್ ಮಾತ್ರವಲ್ಲದೆ ಕ್ರೀಡೆ, ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಸಮಾಜಸೇವೆಯಂತಹ ಎಲ್ಲ ಕ್ಷೇತ್ರಗಳಲ್ಲಿ ನಿಮ್ಮನ್ನು ಉತ್ತೇಜಿಸುವ ಯೋಜನೆಗಳಿವೆ. ನಿಮ್ಮಲ್ಲಿರುವ ಸೃಜನಶೀಲತೆಗೆ ನಾವು ಹೆಬ್ಬಾಗಿಲು ತೆರೆಯುತ್ತಿದ್ದೇವೆ. ಈ ಎಲ್ಲಾ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟಿçÃಯ ಏಕತಾದಿನದ ಅಂಗವಾಗಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಕೊಟ್ಟರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಹಾಗೂ ವಿವಿಯ ಸಿಂಡಿಕೇಟ ಸದಸ್ಯರು, ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


















