ಇಂಡಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ; ಆಹಾರ ಇಲಾಖೆಯ ಅಧಿಕಾರಿಗಳಿಂದ ದಾಳಿ
ಇಂಡಿ : ಸರ್ಕಾರ ಬಡವರು ಹಸಿವಿನಿಂದ ಬಳಲಬಾರದು ಎಂದು ಪಡಿತರ ಅಂಗಡಿಗಳ ಮೂಲಕ ಬಡಜನರಿಗೆ ಉಚಿತವಾಗಿ ಅಕ್ಕಿ ಸೇರಿದಂತೆ ಕೆಲ ಆಹಾರ ಧಾನ್ಯಗಳನ್ನು ನೀಡುತ್ತದೆ. ಕೇಂದ್ರ ಸರ್ಕಾರ ಪ್ರತಿಯೊಬ್ಬ ಪಡಿತರ – ದಾರನಿಗೆ ಐದು ಕಿಲೋ ಅಕ್ಕಿ ನೀಡಿದ್ರೆ, ರಾಜ್ಯ ಸರ್ಕಾರ ಐದು ಕಿಲೋ ಅಕ್ಕಿ ಬದಲಾಗಿ ಇದೀಗ ಹಣವನ್ನು ನೀಡುತ್ತಿದೆ. ಆದ್ರೆ, ಬಡ ಜನರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಧಾನ್ಯಗಳು, ಬಡವರ ಹೊಟ್ಟೆ ತುಂಬಿಸದೇ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ.
ಅದಕ್ಕೆ ಸಾಕ್ಷಿ ಎಂಬಂತೆ ನಿನ್ನೆಯ ದಿನ ಅಕ್ರಮ ಅಕ್ಕಿ ಸಾಗಾಟ ವೇಳೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಶಿರಸ್ತೆದಾರ ಪರಮಾನಂದ ಹೂಗಾರ ಹಾಗೂ ಪೊಲೀಸರು ದಾಳಿಗೈದು ಅಪಾರ ಪ್ರಮಾಣದ ಅಕ್ಕಿ ಹಾಗೂ ಖದಿಮರನ್ನು ಬಂದಿಸಿರುವ ಘಟನೆ ಇಂಡಿ ತಾಲ್ಲೂಕಿನ ಬಸನಾಳ ರಸ್ತೆಯಲ್ಲಿ ನಡೆದಿದೆ. ಅಂಜಾದ ಪಠಾಣ, ಅವಿನಾಶ್ ಘುಲೆ ಬಂಧಿತ ಆರೋಪಿಗಳು.ಸಂಭಾಜಿ ಗಾಯಕವಾಡ, ಪವನ ತೊಟ್ಲಾ ಈ ಇಬ್ಬರು ಮಾಲೀಕರು ಪರಾರಿಯಾಗಿದ್ದಾರೆ. ಆರೋಪಿಗಳು ಲಾರಿಯಲ್ಲಿ 8,23,310 ಮೌಲ್ಯದ 28,390 ಕೆಜಿ ಅಕ್ಕಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು ಅಕ್ಕಿ, ಲಾರಿಯನ್ನು ಜಪ್ತಿಗೈದಿದ್ದಾರೆ. ಈ ಕುರಿತು ಹೊರ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.