ಇಂಡಿ ಜಿಲ್ಲೆ ಮಾಡದಿದ್ದರೆ, ರಾಜಕೀಯ ನಿವೃತ್ತಿ..! ಶಾಸಕ ಪಾಟೀಲ್
ಇಂಡಿ: ಇಂಡಿ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿಯೇ ಮುಂದಿನ 2028ರ ವಿಧಾನ ಸಭೆಯ ಚುನಾವಣೆ ಎದುರಿಸುತ್ತೇನೆ. ಜಿಲ್ಲೆ ಮಾಡದಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ನಾನು ಯಾವತ್ತಿಗೂ ಬಧ್ಧತೆಯ ರಾಜಕಾರಣ ಮಾಡುತ್ತೇನೆ ಎಂದು ಶಾಸಕ
ಯಶವಂತರಾಯಗೌಡ ಪಾಟೀಲ ಪುನರುಚ್ಚರಿಸಿದ್ದಾರೆ.
ಶುಕ್ರವಾರ ಇಂಡಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಇಂಡಿ ತಾಲ್ಲೂಕಿನ ಅಭಿವೃದ್ಧಿಗಾಗಿ ಚಿಮ್ಮಲಗಿ, ಮುಳವಾಡ, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಭಾಗದ ರೈತರ ಸಂಕಷ್ಟಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ರೇವಣಿಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಪ್ರಾರಂಭಿಸಲಾಗಿದೆ. ಕೋಲಾರದಿಂದ ಚಡಚಣ ತಾಲ್ಲೂಕಿನ ಸಾವಳಸಂಗ ಗ್ರಾಮದ ಗುಡ್ಡದವರೆಗೆ ನೀರು ತಂದು ಇಂಡಿ ತಾಲ್ಲೂಕಿನ 28 ಕೆರೆಗಳು ಮತ್ತು ಚಡಚಣ ತಾಲ್ಲೂಕಿನ 8 ಕೆರೆಗಳನ್ನು ತುಂಬಿಸುವ ಕೆಲಸ ಕೈಗೆತ್ತಿಕೊಂಡಿದೆ ಎಂದರು.
ಇಂಡಿ, ಚಡಚಣ, ಸಿಂದಗಿ ತಾಲ್ಲೂಕುಗಳ ದಂಡೆಗೆ ಹರಿದಿರುವ ಭೀಮಾ ನದಿಯಿಂದ 15 ಟಿಎಂಸಿ ನೀರಿನ ಬಳಕೆಯಾಗಬೇಕಿದೆ. ಈ ಬಗ್ಗೆ ಬರುವ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವದು. ಈ ಮೂರು ತಾಲ್ಲೂಕುಗಳ ಬರ ನಿಭಾಯಿಸಲು ಸರ್ಕಾರದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೆ ತರಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವದು ಎಂದರು. ಇಂಡಿ ತಾಲ್ಲೂಕಿನ ಪಡನೂರ ಗ್ರಾಮದ ಬಳಿ ಭೀಮಾ ನದಿಗೆ
ಅಡ್ಡಲಾಗಿ ಸೇತುವೆ ಕಟ್ಟಲು ಕ್ರೀಯಾ ಯೋಜನೆ
ಸಿದ್ದಗೊಂಡಿದ್ದು, ಬರುವ ಒಂದು ವರ್ಷದಲ್ಲಿ ಸೇತುವೆ
ಲೋಕಾರ್ಪಣೆಯಾಗುವದು ಎಂದು ಭರವಸೆ ನೀಡಿದ
ಅವರು ಈ ಸೇತುವೆಯಾದರೆ ಇಂಡಿಯಿಂದ ಪಡನೂರ,
ತಡವಾಳ ಮಾರ್ಗವಾಗಿ ನೇರವಾಗಿ ಸೋಲಾಪೂರ
ತಲುಪಬಹುದು ಎಂದರು. ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನಕ್ಕೆ ವಿಶಾಲವಾದ ರಸ್ತೆ ಮಾಡಲು 1.5 ಕೋಟಿ ಅನುದಾನ ಅವಶ್ಯವಿದ್ದು, ಜನಸಾಮಾನ್ಯರು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ನಾನು ಸೇರಿ ಇಷ್ಟರಲ್ಲಿಯೇ ರಸ್ತೆ ಮಾಡಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಇಂಡಿ ಪಟ್ಟಣದಲ್ಲಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕೇಂದ್ರ ಸ್ಥಾಪನೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ, ಚಡಚಣ ತಾಲ್ಲೂಕಿನ ಶಿರಾಡೋಣದಿಂದ ಲಿಂಗಸೂರು ಪಟ್ಟಣದವರೆಗೆ ರಸ್ತೆ ಅಗಲೀಕರಣಕ್ಕೆ ಮಂಜೂರಾತಿ ಸಿಕಿದ್ದು, ಇಷ್ಟರಲ್ಲಿಯೇ ರಸ್ತೆ ಕಾಮಗಾರಿ
ಪ್ರಾರಂಭಿಸಲಾಗುವದು ಎಂದರು. ಇಂಡಿ ತಾಲ್ಲೂಕಿನ
ಹಿರೇಬೇವನೂರ ಗ್ರಾಮದ ಜ್ಞಾನಯೋಗಿ ಡಾ.ಶಿವಕುಮಾರ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದು
ರೈತರಿಗೆ ತೊಂದರೆಯಾಗಿದೆ. ಅದನ್ನು ಮುಂದಿನ ಕಬ್ಬು
ಅರೆಯುವ ಹಂಗಾಮಿನ ಅವಧಿಯೊಳಗೆ ಪುನರ್
ಪ್ರಾರಂಭಿಸಲು ಪ್ರಯತ್ನಗಳು ನಡೆದಿವೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ತಹಶೀಲ್ದಾರ ಬಿ.ಎಸ್.ಕಡಕಭಾವಿ, ತಾಲ್ಲೂಕು ಪಂಚಾಯತಿ ಇಓ ಬಾಬುರಾವ ರಾಠೋಡ, ಡಿವೈಎಸ್ಪಿ ಜಗದೀಶ ಎಚ್.ಎಸ್, ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಆಲಗೂರ, ಕಾಂಗ್ರೆಸ್ ಮುಖಂಡ ಜೆಟ್ಟೆಪ್ಪರವಳಿ, ಪ್ರಶಾಂತ ಕಾಳೆ, ಜಾವೀದ ಮೋಮಿನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇಂಡಿ: ಶಾಸಕ ಯಶವಂತ್ರಾಯಗೌಡ ಪಾಟೀಲ ಭಾವಚಿತ್ರ.