ICC ODI World CUP 2023 : ಹರಿಣಗಳ ವಿರುದ್ಧ ಸೋತ ಬಾಂಗ್ಲಾ ಹುಲಿಗಳು..
Voice Of Janata Desk News ಮುಂಬೈ: ವಾಣಿಜ್ಯ ನಗರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಸಿಸಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 149 ರನ್ ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದೆ. ಕ್ವಿಂಟನ್ ಡಿ ಕಾಕ್ 174 ರನ್ ಗಳಿಸುವ ಮೂಲಕ ಸ್ಟಾರ್ ಮ್ಯಾನ್ ಆದರು. ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗಳಿಸಿದ ಸ್ಕೋರ್ ವಿಶ್ವಕಪ್ ಇನ್ನಿಂಗ್ಸ್ ನಲ್ಲಿ ಗಳಿಸಿದ ಎರಡನೇ ಗರಿಷ್ಠ ಸ್ಕೋರ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್ ಗಳಿಸಿತು. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 140 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್, 15 ಬೌಂಡರಿಗಳೊಂದಿಗೆ 174 ರನ್ ಗಳಿಸಿದರೆ, ಐಡೆನ್ ಮಾರ್ಕ್ರಾಮ್ 60, ಕ್ಲಾಸೇನ್ 90, ಡೇವಿಡ್ ಮಿಲ್ಲರ್ 34 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ನೀಡಿದ 383 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಬಾಂಗ್ಲಾದೇಶ ದ ಪರ ಮಹಮುದುಲ್ಲಾ 111 ರನ್ ಗಳಿಸಿದರು. ಇವರನ್ನು ಹೊರತು ಪಡಿಸದರೆ ಬೇರೆ ಯಾವುದೇ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಇದರಿಂದಾಗಿ 46. 4 ಓವರ್ ಗಳಲ್ಲಿ 233 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಯಿತು. ದಕ್ಷಿಣ ಆಫ್ರಿಕಾ ಪರ ಭರ್ಜರಿ ಶತಕ ಗಳಿಸಿದ ಕ್ವಿಂಟನ್ ಡಿ ಕಾಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.