ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವಿತರಿಸಿದ ಶಾಸಕ ಎಂ ಆರ್ ಮಂಜುನಾಥ್
ಗುಡಿಸಲು ಮುಕ್ತ ರಾಜ್ಯಕ್ಕಾಗಿ ವಸತಿ ಯೋಜನೆ : ಶಾಸಕ ಎಮ್ ಆರ್ ಮಂಜುನಾಥ್
ಹನೂರು : ವಸತಿ ಫಲಾನುಭವಿಗಳು ನಿಗಧಿತ ಅವಧಿಯೊಳಗೆ ವಸತಿ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ ಸಾಕಾರಗೊಳಿಸಬೇಕೆಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಬಸವ ವಸತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ (ಗ್ರಾಮೀಣ), ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರ ವಿತರಣೆ ಮಾಡಿ ಬಳಿಕ ಮಾತನಾಡಿದರು.
ಸರ್ಕಾರಗಳು ಗುಡಿಸಲು ಮುಕ್ತ ರಾಜ್ಯವಾಗಿಸುವ ನಿಟ್ಟಿನಲ್ಲಿ ಅನೇಕ ವಸತಿ ಸೌಲಭ್ಯಗಳನ್ನು ನೀಡುತ್ತಾ ಬಂದಿವೆ. ವಿ.ಸೋಮಣ್ಣ ವಸತಿ ಸಚಿವರಾಗಿದ್ದ ವೇಳೆ ನಮಗೆ ಹೆಚ್ಚಿನ ವಸತಿ ಸೌಲಭ್ಯಗಳನ್ನು ಅನುಮೋದನೆ ನೀಡಿದ್ದರು. ಕ್ಷೇತ್ರಕ್ಕೆ ಇನ್ನೂ 20 ರಿಂದ 25 ಸಾವಿರ ಮನೆಗಳ ಅವಶ್ಯಕತೆ ಇದೆ. ಎಂ.ಪಿ.ಚುನಾವಣೆ ಬಳಿಕ ನಾನೇ ಖುದ್ದು ಗ್ರಾಮಗಳಿಗೆ ಭೇಟಿ ನೀಡಿ ವಸತಿ ರಹಿತರನ್ನು ಗುರುತಿಸಿ ಸೌಕರ್ಯವನ್ನು ಒದಗಿಸಲಾಗುವುದು. ಕ್ಷೇತ್ರದಲ್ಲಿ ಕುಡಿಯುವ ನೀರು ರಸ್ತೆ ವಿದ್ಯುತ್ ಶಿಕ್ಷಣ ಆರೋಗ್ಯ ಸಂಬಂಧಿತ ಸೌಕರ್ಯಗಳಾಗಬೇಕಾಗಿದೆ. ರಾಮಪುರ ಗರಿಕೆಕಂಡಿ ಮುಖ್ಯ ರಸ್ತೆಗೆ 25 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಹನೂರಿನ ಆಸ್ಪತ್ರೆಗೆ 100 ಬೆಡ್ ಗಳ ಹಾಸಿಗೆ ವ್ಯವಸ್ಥೆ, ರಾಮಪುರದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು. ಕಾರ್ಯಕ್ರಮದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿರುವ ವ್ಯಾಟ್ಸಾಪ್ ಮೂಲಕ ಮಾಹಿತಿಯ ಆರ್.ಡಿ.ಪಿ.ಆರ್. ಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳಾದ, ರವಿ, ಪ್ರೇಮಾ, ರುದ್ರನಾಯಕ, ಉಪಾಧ್ಯಕ್ಷರಾದ ಬೇಬಿ,ಹಾಗೂ ಸದಸ್ಯರಾದ ಸರೋಜಭಾಯಿ,ರಾಜೇಂದ್ರ,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅರ್ಹ ವಸತಿ ಫಲಾನುಭವಿಗಳು ಉಪಸ್ಥಿತರಿದ್ದರು.
ವರದಿ : ಚೇತನ್ ಕುಮಾರ್ ಎಲ್, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.