– ಜ್ಯುವೆಲರ್ ಅಸೋಸಿಯೇಷನ್ ಆಫ್ ಬೆಂಗಳೂರು ಸಹಯೋಗದಲ್ಲಿ ಜಿಇಎಸ್ ಇಂಡಿಯಾ ಆಯೋಜಿಸಿದ್ದ ಸೌತ್ ಜ್ಯೂಯೆಲ್ಲರಿ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ.
– ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ 110 ಕ್ಕೂ ಹೆಚ್ಚು ಆಭರಣ ಉತ್ಪಾದಕರು ಭಾಗಿ ರಿಟೇಲರ್‌ಗಳಿಗೆ ಮಾತ್ರ ಪ್ರವೇಶ.
ಬೆಂಗಳೂರು ಮಾರ್ಚ್ 05: ಕೇಂದ್ರ ಸರಕಾರ ದೇಶದಲ್ಲಿರುವ ಅಮೂಲ್ಯ ಲೋಹಗಳ ನಿಕ್ಷೇಪಗಳ ಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ದೇಶದಲ್ಲಿ ಸುಮಾರು 900 ಟನ್ ಗಳಷ್ಟು ಬಂಗಾರದ ಲೋಹದ ನಿಕ್ಷೇಪ ಇರುವ ಅಂದಾಜಿದ್ದು ಅದರ ಜೊತೆಗೆ ಕಾಪರ್, ಅಲ್ಯೂಮಿನಿಯಂ ನ ನಿಕ್ಷೇಪಗಳ ಶೋಧನೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ಜ್ಯುವೆಲರ್ ಅಸೋಸಿಯೇಷನ್ ಆಫ್ ಬೆಂಗಳೂರು ಸಹಯೋಗದಲ್ಲಿ ಜಿಇಎಸ್ ಇಂಡಿಯಾ ಮಾರ್ಚ್ 4 ರಿಂದ 6 ರ ವರೆಗೆ ಆಯೋಜಿಸಿರುವ ಸೌತ್ ಜ್ಯೂಯೆಲ್ಲರಿ ಶೋನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆಭರಣ ತಯಾರಿಕಾ ಕ್ಷೇತ್ರ ದೇಶದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಿರುವ ಕ್ಷೇತ್ರಗಳಲ್ಲೊಂದಾಗಿದೆ. ಈ ಕ್ಷೇತ್ರದ ಉದ್ಯೋಗದಲ್ಲಿ ತೊಡಗಿಕೊಳ್ಳುವವರಿಗೆ ಹೆಚ್ಚಿನ ಕೌಶಲ್ಯತೆಯ ಅಗತ್ಯತೆ ಇದೆ. ಸಾಂಪ್ರದಾಯಿಕ ಆಭರಣಗಳ ತಯಾರಿಕೆಯಲ್ಲಿರುವ ಬಹಳಷ್ಟು ಜನರು ತಮ್ಮ ಅನುಭವದಿಂದ ಕೌಶಲ್ಯತೆಯನ್ನು ಪಡೆದುಕೊಂಡಿದ್ದಾರೆ. ದೇಶ ವಿದೇಶದಲ್ಲಿ ನಮ್ಮ ದೇಶಧ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಗೊಳ್ಳಲು ವಿಫುಲ ಅವಕಾಶವಿದೆ. ಈ ಹಿನ್ನಲೆಯಲ್ಲಿ ಯುವ ಜನಾಂಗ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಭಾರತ ದೇಶ ಬಂಗಾರವನ್ನು ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ. ಇದೇ ರೀತಿ ತಾಮ್ರ ಹಾಗೂ ಅಲ್ಯೂಮಿನಿಯಂ ಲೋಹಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಬೇರೆ ದೇಶಗಳ ಮೇಲಿನ ಆವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ನಮ್ಮ ದೇಶದಲ್ಲಿ ಲಭ್ಯವಿರುವ ಲೋಹಗಳ ನಿಕ್ಷೇಪಗಳನ್ನು ಶೋಧಿಸಲು ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಶೋಧನೆಯ ಕಾರ್ಯದಲ್ಲಿ ತೊಡಗಿಕೊಳ್ಳುವವರಿಗೂ ಧನಸಹಾಯ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಗುರುತಿಸಲಾಗಿರುವ ಬಂಗಾರದ ನಿಕ್ಷೇಪಗಳ ಹರಾಜಿಗೆ ಈಗಾಗಲೇ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ, ಈ ಪ್ರಕ್ರಿಯೆಯ ನಂತರ ಉತ್ತಮ ಪ್ರಮಾಣದ ಬಂಗಾರ ಹೊರತಗೆಯುವ ಭರವಸೆ ಇದೆ. ಸುಮಾರು 900 ಟನ್‌ಗಳಷ್ಟು ಬಂಗಾರದ ನಿಕ್ಷೇಪ ಇರುವ ಅಂದಾಜಿದ್ದು ಅದನ್ನು ಭೂಗರ್ಭದಿಂದ ತಗೆದು ಮಾರುಕಟ್ಟೆಗೆ ತರುವ ಪ್ರಯತ್ನ ಸಾಗಿದೆ. ಇದೇ ರೀತಿ ನಮ್ಮ ಹತ್ತಿರ ಬಹಳ ತಾಮ್ರದ ನಿಕ್ಷೇಪಗಳೂ ಇದ್ದು ಅವುಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಭಾರತ ದೇಶ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಆಭರಣ ತಯಾರಿಕಾ ಕ್ಷೇತ್ರದ ಉದ್ಯಮಗಳನ್ನು ಇನ್ನು ಹೆಚ್ಚು ಬೆಳೆಸುವಂತೆ ಕರೆ ನೀಡಿದ ಸಚಿವರು ಸರಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎನ್ನುವ ಭರವಸೆ ನೀಡಿದರು.
ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ಮಾತನಾಡಿ, ಆಭರಣ ಕ್ಷೇತ್ರ ಭಾರತದ ಹೆಮ್ಮೆಯ ಕ್ಷೇತ್ರಗಳಲ್ಲೊಂದು. ಈ ಉದ್ಯಮ ಇನ್ನಷ್ಟು ಬೆಳೆಯಲಿ ಎನ್ನುವುದು ನಮ್ಮ ಆಶಯ ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆಯಲಿರುವ ಈ ಶೋ ನಲ್ಲಿ ಭಾರತದ 110 ಕ್ಕೂ ಹೆಚ್ಚು ಪ್ರಮುಖ ಆಭರಣ ತಯಾರಕರು ಪಾಲ್ಗೊಂಡಿದ್ದು, ಚಿನ್ನ,ಬೆಳ್ಳಿ ಮತ್ತು ವಜ್ರದ ಆಭರಣಗಳ ಮಾರಾಟ ಮತ್ತು ಪ್ರದರ್ಶನವಿದೆ. ಕೇವಲ ಆಭರಣ ಮಾರಾಟ ಕ್ಷೇತ್ರದಲ್ಲಿರುವ ರೀಟೇಲ್ ನವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.