ವಿವಿಧ ಗ್ರಾಮ ಪಂಚಾಯತಿಗಳಿಗೆ ಉಪ ಚುನಾವಣೆ ಅಧಿಸೂಚನೆ ಹೊರಡಿಸಿ ಆದೇಶ .DC ವಿಜಯಮಾಹಂತೇಶ
ವಿಜಯಪುರ- ಫೆ.8: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ನಿಯಮಗಳ ಅನ್ವಯ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿಗೆ ಅವಧಿ ಮುಕ್ತಾಯವಾಗಿರುವ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಫೆ.25 ರಂದು ಚುನಾವಣೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧಿಸೂಚನೆ ಹೊರಡಿಸಿದ್ದಾರೆ.
2023ರ ಏಪ್ರಿಲ್ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಇಂಗಳಗೇರಿ ಮತಕ್ಷೇತ್ರ ನಂ.1ರ ಮೂರು ಸ್ಥಾನಗಳಿಗೆ, ಮತಕ್ಷೇತ್ರ ನಂ.2ರ ಎರಡು ಸ್ಥಾನಗಳಿಗೆ, ಗುಡ್ನಾಳ ಮತಕ್ಷೇತ್ರ ನಂ.3ರ ನಾಲ್ಕು ಸ್ಥಾನಗಳಿಗೆ, ಜಮ್ಮಲದಿನ್ನಿ ಮತಕ್ಷೇತ್ರ ನಂ.4ರ ಮೂರು ಸ್ಥಾನಗಳಿಗೆ, ದೇವರಹುಲಗಬಾಳ ಮತಕ್ಷೇತ್ರ ನಂ.5ರ ಮೂರು ಸ್ಥಾನಗಳಿಗೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮ ಪಂಚಾಯತಿಯ ಅರಸನಾಳ ಒಂದು ಸ್ಥಾನಕ್ಕೆ, ತಾಳಿಕೋಟೆ ತಾಲೂಕಿನ ಹಿರೂರ ಗ್ರಾಮ ಪಂಚಾಯತಿಯ ಚೋಕಾವಿ ಹಾಗೂ ತಮದಡ್ಡಿ ತಲಾ ಒಂದು ಸ್ಥಾನಕ್ಕೆ ಚಡಚಣ ತಾಲ್ಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ ಫೆ.25ರಂದು ಚುನಾವಣೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಚುನಾವಣಾ ವೇಳಾ ಪಟ್ಟಿ : ಫೆ.14 (ಮಂಗಳವಾರ) ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಫೆ.15ರಂದು (ಬುಧವಾರ) ನಾಮಪತ್ರಗಳ ಪರಿಶೀಲನೆ, ಫೆ.17 (ಶುಕ್ರವಾರ) ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನ. ಫೆ.25 ರಂದು (ಶನಿವಾರ) ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಅವಶ್ಯವಿದ್ದರೆ ಮತದಾನ ಹಾಗೂ ಫೆ.28 (ಮಂಗಳವಾರ) ಚುನಾವಣೆಯನ್ನು ಮುಕ್ತಾಯಗೊಳಿಸುವ ದಿನಾಂಕವನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.