ಸರ್ಕಾರಿ ನೌಕರರ ಮುಷ್ಕರ; ಪರದಾಡಿದ ಜನರು..!
ಇಂಡಿ : ಎಂದಿನಂತೆ ತಾಲ್ಲೂಕು ಕೇಂದ್ರಕ್ಕೆ ಆಗಮಿಸಿದ ರೈತಾಪಿ ಜನರು ಹಾಗೂ ಪಟ್ಟಣದ ಆಸ್ಪತ್ರೆಗೆ ಆಗಮಿಸಿದ ರೋಗಿಗಳು ಸರಕಾರಿ ನೌಕರರ ಮುಷ್ಕರ ಹಿನ್ನೆಲೆ ಪರದಾಡುವಂತಾಯಿತು.
ತಾಲ್ಲೂಕಿನ ಎಲ್ಲಾ ಇಲಾಖೆಯ ಸರಕಾರಿ ನೌಕರರು ಬೆಳಿಗ್ಗೆ ಯಿಂದಲೇ ಕಛೇರಿಗೆ ಗೈರಾಗುವ ಮೂಲಕ ತಾಲೂಕು ಆಡಳಿತ ಸೌಧದ ಎದುರು ಹಾಜರಿದ್ದು ಮುಷ್ಕರಕ್ಕೆ ಬೆಂಬಲ ನೀಡಿದರು.
ರಾಜ್ಯ ಸರಕಾರಿ ನೌಕರರ ಸಂಘದ ಮತ್ತು ಸರಕಾರದ ಮದ್ಯ ಎನ್ ಪಿ ಎಸ್ ಮತ್ತು ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಸುಮಾರು ದಿನಗಳ ಕಾಲ ಹಗ್ಗಜಗ್ಗಾಟ ನಡೆದಿತ್ತು. ಜೊತೆಗೆ ಸರಕಾರ ಅನೇಕ ಸಭೆಗಳು ನಡೆಸಿದ್ದರೂ ಸಫಲವಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ ಸೂಚನೆ ಮೇರೆಗೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಇಂದು ತಾಲ್ಲೂಕಿನಲ್ಲಿ ಬಹುತೇಕ ಎಲ್ಲಾ ಇಲಾಖೆ ಸರಕಾರಿ ನೌಕರರು ಕೆಲಸಕ್ಕೆ ಗೈರು ಆಗುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡಿದ್ದರು.
ತದನಂತರ ರಾಜ್ಯ ಸರಕಾರದ ಆದೇಶ ಮೇರೆಗೆ ಮಧ್ಯಾಹ್ನ 1 ಘಂಟೆಯ ನಂತರ ಮುಷ್ಕರ ವಾಪಸ್ ಪಡೆದರು ಈ ಸಂದರ್ಭದಲ್ಲಿ ತಾಲ್ಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಡಿ ಪಾಟೀಲ ಮಾತಾನಾಡಿದ ಅವರು, ನೌಕರರ ಬೇಡಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಂದಿಸಿದ್ದಾರೆ. ಅದಕ್ಕಾಗಿ ನೌಕರರ ಪರವಾಗಿ ಧನ್ಯವಾದ ತಿಳಿಸುತ್ತೇವೆ. ಇನ್ನೂ ನೌಕರರ ಮುಷ್ಕರಕ್ಕೆ ಸರ್ಕಾರ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಿದೆ. ಅದೇ ತರಹ ರಾಜ್ಯಾಧ್ಯಕ್ಷ ಷಡಕ್ಷರಿ ಸೂಚನೆ ಮೇರೆಗೆ ಮರಳಿ ಕೆಲಸಕ್ಕೆ ಹಾಜರಾಗುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಎಸ್ ಆರ್ ಪಾಟೀಲ, ಎಸ್ ಎನ್ ಕೋಳಿ, ಆರ್ ಎಮ್ ಮೇತ್ರಿ, ಬಿ.ಎಮ್ ಅಂಜುಟಗಿ, ಆರ್ ಸಿ ವಠಾರ, ಜಿ.ಪಿ ಕಟ್ಟಿಮನಿ ಸಂಘದ ಪದಾಧಿಕಾರಿಗಳು ಹಾಗೂ ಅನೇಕ ಇಲಾಖೆ ನೌಕರರು ಸಿಬ್ಬಂದಿ ವರ್ಗ ಹಾಜರಿದ್ದರು.