ಮೂಲಭೂತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ:ಎಂ ಆರ್ ಮಂಜುನಾಥ್
ಹನೂರು : ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಜನ ಸಾಮಾನ್ಯರ ಆರೋಗ್ಯದ ಕಡೆಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿ ಗೃಹ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕಿನ ಗ್ರಾ.ಪಂ.ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು ಹಲವು ವರ್ಷಗಳೇ ಕಳೆದಿದೆ. ಇನ್ನು ಹಲವು ಗ್ರಾಮೀಣ ಭಾಗದ ಹಳ್ಳಿಗಳು ಹಾಡಿಗಳ ಜನತೆಗೆ ಸಮರ್ಪಕ ಮೂಲಭೂತ ಸೌಲಭ್ಯ ದೊರೆತಿಲ್ಲ. ಈ ದಿಸೆಯಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ವಂಚಿತರಿಗೆ ಪ್ರಾಮಾಣಿಕವಾಗಿ ಸೌಲಭ್ಯ ಒದಗಿಸುವ ಮೂಲಕ ನಿಮ್ಮ ಮನಸಾಕ್ಷಿ ಒಪ್ಪುವಂತೆ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ನರೇಗಾ ಮತ್ತು15ನೇ ಹಣಕಾಸು ಅನುದಾನವಾಗಿದೆ. ನರೇಗಾ ಯೋಜನೆ ಗ್ರಾಮಾಭಿವೃದ್ದಿ ಮತ್ತು ವೈಯಕ್ತಿಕ ಕಾಮಾಗಾರಿ ನಿರ್ಮಿಸಲು ಸಾಕಷ್ಟು ಹಣ ಬಳಕೆ ಮಾಡಬಹುದು. ಹೀಗಿದ್ದರೂ ಜನಪ್ರತಿನಿಧಿಗಳು ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಗ್ರಾಮಸ್ಥರ ಸಹಕಾರ ಪಡೆದು ಪಿಡಿಒಗಳು ಚುನಾಯಿತ ಸದಸ್ಯರು ಹಣ ದುರ್ಬಳಕೆ ಮಾಡಿಕೊಳ್ಳದೇ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಧೀರ್ಘಕಾಲ ಸಾರ್ವಜನಿಕರಿಗೆ ಉಪಯೋಗವಾಗುವ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಬೇಕು.
ಅಲ್ಲದೆ 15ನೇ ಹಣಕಾಸಿನಲ್ಲಿ ಕುಡಿಯುವ ನೀರು ಸ್ವಚ್ಛತೆ ಬೀದಿ ದೀಪ ನಿರ್ವಹಣೆ ಚರಂಡಿ ಹೂಳು ತೆಗೆಯುವುದು ನೌಕರರ ವೇತನ ಇನ್ನಿತರ ಕೆಲಸಗಳನ್ನು ಮಾಡಬಹುದು.
ಸಭೆಯ ಪ್ರಾರಂಭದಲ್ಲಿ ಕುಡಿಯುವ ನೀರು, ವಸತಿ, ಮನರೇಗಾ, ಶುಚಿತ್ವಕ್ಕೆ ಮನ್ನಣೆ, ಇ ಸ್ವತ್ತು ಪ್ರಗತಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಆಯಾ ಗ್ರಾ.ಪಂ.ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇ ಸ್ವತ್ತನ್ನು ಎಷ್ಟು ದಿನಗಳ ಒಳಗಡೆ ಮಾಡುತ್ತೀರಾ, ಇನ್ನೂ ವಸತಿ ಫಲಾನುಭವಿಗಳು ಮನೆಯ ನಿರ್ಮಾಣದಲ್ಲಿ ತೊಡಗದೇ ಇರಲು ಕಾರಣ ಏನು ಎಂಬುದರ ಬಗ್ಗೆ ಕಾರ್ಯಸ್ಥಳಕ್ಕೆ ಖುದ್ದು ಬೇಟಿ ನೀಡಿ ವರದಿ ನೀಡಬೇಕು. ಇ-ಸ್ವತ್ತು ಮಾಡಲು ನಿಗಧಿತ ಸಮಯವನ್ನು ಮೀಸಲಿಡಲು ಕ್ರಮವಹಿಸಬೇಕು, ಗೊತ್ತಿರುವ ಮಂದಿ ಇ-ಸ್ವತ್ತು ಮಾಡಿಸಲು ಬಾರದೆ ಇರುವುದರಿಂದ ಅಧಿಕಾರಿಗಳೇ ಖುದ್ದು ಬೇಟಿ ನೀಡಿ ಇಸ್ವತ್ತು ಮಾಡಿಕೊಡಲು ಕ್ರಮವಹಿಸಿ.
ಗ್ರಾ.ಪಂ. ಚುನಾಯಿತಿ ಜನಪ್ರತಿನಿಧಿಗಳನ್ನು ಮೀಟಿಂಗ್ ಕರೆದು ಇ-ಸ್ವತ್ತು ಮಾಡಲು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
ಕುಡಿಯುವ ನೀರು ಸಮರ್ಪಕವಾಗಿ ಸಿಗಬೇಕು. ತೊಂಬೆಗಳ ಸ್ವಚ್ಛತೆ ಆದ್ಯತೆ ನೀಡಬೇಕು. ಮುಂದಿನ ಬಾರಿ ಕುಡಿಯುವ ನೀರಿನ ತೊಂಬೆಗಳನ್ನು ಶುಚಿಗೊಳಿಸಿ ಒಂದು ನಿಗಧಿತ ಬಣ್ಣ ಬಳಿಯಲು ಕ್ರಮವಹಿಸಬೇಕು. ಪಿಡಿಒಗಳ ವ್ಯಾಟ್ಸಾಪ್ ಗ್ರೂಪ್ ಮಾಡಿ ನನ್ನ ಸೇರಿಸಿ. ಈ ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ನಾನೇ ಒಮ್ಮೆ ಗ್ರಾ.ಪಂ.ಬೇಟಿ ನೀಡುತ್ತೇನೆ. ವಿನಾ ಕಾರಣ ಗ್ರಾ.ಪಂ. ದೂರು, ಮಾಹಿತಿ ಹಕ್ಕು ಕೇಳುವುದು ಮಾಡುವವರ ಬಗ್ಗೆ ತಿಳಿದುಕೊಳ್ಳಲು ಒಂದು ವಿಶೇಷ ಗ್ರಾಮ ಸಭೆ ಆಯೋಜಿಸಿ ಎಂದರು. ಮಿಣ್ಯ್ ಗ್ರಾ.ಪಂ.ವ್ಯಾಪ್ತಿಯಲ್ಲಿ ಹಿಂದುಳಿದ ಜನಾಂಗದವರು ಹೆಚ್ಚಾಗಿ ಇದ್ದು ಅಲ್ಲಿನ ಜನತೆಗೆ ಕನಿಷ್ಠ ಮೂಲಭೂತ ಸೌಕರ್ಯ ಉದ್ಯೋಗ ನೀಡಲು ಈ ಹಿಂದಿನ ಪಿಡಿಒ ಮಾದೇಶ್ ವಿಫಲರಾಗಿದ್ದೀರಿ ಎಂದು ತರಾಟೆಗೆ ತೆಗೆದು ಕೊಂಡರು. ಅಲ್ಲದೇ ಹಾಲಿ ಪಿಡಿಒ ಗಂಗಾಧರ್ ತಮ್ಮ ಅನುಭವ ಬಳಸಿಕೊಂಡು ಮಿಣ್ಯ್ ಗ್ರಾ.ಪಂ.ಅಭಿವೃದ್ಧಿಗೆ ಒತ್ತು ನೀಡಿ ಎಂದರು. ಚಿಕ್ಕಮಾಲಾಪುರ ಪಿಡಿಒ ಗೆ ಉದ್ಯೋಗ ಕೊಡಲು ಖಡಕ್ ಆಗಿ ಸೂಚಿಸಿದರು. ಕೌದಳ್ಳಿ ಶುಚಿತ್ವಕ್ಕೆ ಅಲ್ಲಿನ ಜನತೆ ಜನಪ್ರತಿನಿಧಿಗಳು, ಅಧಿಕಾರಿಗಳು ಏಕೆ ಸ್ಪಂದಿಸುತ್ತಿಲ್ಲ ಕೌದಳ್ಳಿ ಅಂದರೆ ಹೀಗೆನಾ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವೈ ಕೆ ಗುರುಪ್ರಸಾದ್, ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಎ,ಡಿ ರವೀಂದ್ರ, ಜೆ.ಜೆ.ಎಂ ಎ ಇ.ಇ ಹರೀಶ್, ವಿವಿಧ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ